ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಹೊಂದಿರುವ ಗುಜರಾತ್ ಮುಖ್ಯಮಂತ್ರಿಯವರ ಜತೆಗೆ ನೀವು ಗುರುತಿಸಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಕ್ಕೆ ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ಪ್ರತಿಕ್ರಿಯಿಸಿರುವ ರೀತಿಯಿದು. ಮೋದಿ ಓರ್ವ ಜಾತ್ಯತೀತ ನಾಯಕ ಎಂದೂ ಅಮಿತಾಬ್ ಅಭಿಪ್ರಾಯಪಟ್ಟಿದ್ದಾರೆ.
ಅಮಿತಾಬ್ ಜತೆ 'ಎನ್‌ಡಿಟಿವಿ' ನಡೆಸಿದ ಸಂದರ್ಶನವಿದು. ಸಂದರ್ಶನಕಾರರು ಅಮಿತಾಬ್ ಅವರು ಹೊಂದಿರುವ ರಾಜಕೀಯ ಸಂಬಂಧಗಳ ಕುರಿತು ಪ್ರಶ್ನಿಸಿದ್ದಕ್ಕೆ ಉತ್ತರಿಸಿರುವುದನ್ನು ಇಲ್ಲಿ ಪ್ರಕಟಿಸಲಾಗಿದೆ.
* ನೀವು ಈಗಲೂ ಅಮರ್ ಸಿಂಗ್ ಅವರಿಗೆ ಆಪ್ತರಾಗಿದ್ದೀರಾ?
- ಹೌದು, ಅವರು ನನ್ನ ಕುಟುಂಬದ ಸದಸ್ಯರಿದ್ದಂತೆ.
* ನೀವು ಮುಲಾಯಂ ಸಿಂಗ್ ಯಾದವ್ ಅವರಿಂದ ದೂರ ಸರಿದಿದ್ದೀರಾ?
- ನಾವು ಗೆಳೆಯರು. ನಾನು ಅಡ್ವಾಣಿ, ಬಾಳ್ ಠಾಕ್ರೆ ಸೇರಿದಂತೆ ಪ್ರತಿಯೊಬ್ಬರೊಂದಿಗೂ ಗೆಳೆತನ ಹೊಂದಿದ್ದೇನೆ.
* ಆದರೂ ನೀವು ಅಮರ್ ಸಿಂಗ್ ಮತ್ತು ಮುಲಾಯಂ ಅವರನ್ನು ಒಂದುಗೂಡಿಸಲು ಯತ್ನಿಸಿಲ್ಲ?
- ಇಲ್ಲ, ನಾನು ಅವರ ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಅವರು ನನ್ನ ಸಿನಿಮಾ ವಿಚಾರಗಳಲ್ಲಿ ಮಧ್ಯ ಪ್ರವೇಶಿಸುವುದಿಲ್ಲ.
* ಆದರೆ ನೀವು ನರೇಂದ್ರ ಮೋದಿಯವರ ಜತೆ ಗೆಳೆತನ ಬೆಳೆಸಿದ್ದು ಪ್ರತಿಯೊಬ್ಬರಿಗೂ ಅಚ್ಚರಿ ತಂದಿತ್ತು. ನೀವು ಬಹುತೇಕ ಕೋಮುವಾದಿಗಳ ವಿರೋಧಿ ಎಂದೇ ಜನ ಯೋಚಿಸಿದ್ದರು. ಆದರೆ ಮೋದಿ ಕೋಮುವಾದಿ ಬಣ್ಣವನ್ನು ಹೊಂದಿದ್ದಾರಲ್ಲ?
- ಯಾರಾದರೂ ಕೆಲವು ರಾಜಕೀಯ ಸಿದ್ಧಾಂತಗಳನ್ನು ಹೊಂದಿದ್ದರೆ, ಅವರ ಜತೆ ಗೆಳೆತನ ಮಾಡಬಾರದು ಎಂದು ಸಂವಿಧಾನದಲ್ಲಿ ಯಾವುದಾದರೂ ಕಾನೂನು ಇದೆಯೇ? ಯಾರು ಯಾರ ಜತೆಗೆ ಬೇಕಾದರೂ ಗೆಳೆತನ ಮಾಡಲು ಸ್ವಾತಂತ್ರ್ಯವಿದೆ. ನನ್ನ ದೇಶದ ಭಾಗವಾಗಿರುವ ಗುಜರಾತಿಗೆ ಪ್ರಚಾರ ಮಾಡಲು ನಾನು ಹೊರಟ ಬಗ್ಗೆ ನೀವು ಮಾತನಾಡುತ್ತಿದ್ದೀರಿ. ಮೋದಿ ಜನರಿಂದ ಆಯ್ಕೆಯಾಗಿ ರಾಜ್ಯವೊಂದರ ಮುಖ್ಯಮಂತ್ರಿಯಾದವರು. ಹಾಗಲ್ಲ ಎಂದು ನೀವು ರುಜುವಾತುಪಡಿಸಿ, ನಂತರ ನನ್ನಲ್ಲಿ ಮಾತನಾಡಿ.
* ನರೇಂದ್ರ ಮೋದಿ ಓರ್ವ ಜಾತ್ಯತೀತ ವ್ಯಕ್ತಿ ಎಂದು ನೀವು ನಂಬುತ್ತೀರಾ?
- ಹಾಗೆಂದು ನಂಬುತ್ತಿದ್ದೇನೆ. ಯಾಕೆ ನಂಬಬಾರದು? ಈಗಷ್ಟೇ ಅವರು ಸ್ಥಳೀಯ ಚುನಾವಣೆಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಅದು ಕೂಡ ಮುಸ್ಲಿಮರು ಬಹುಸಂಖ್ಯಾತರಾಗಿದ್ದ ಕ್ಷೇತ್ರಗಳಲ್ಲಿ. ಈ ದೇಶವು ಸಾಂವಿಧಾನಿಕವಾಗಿ ಜಾತ್ಯತೀತವಾಗಿರುವುಗಾ ನೀವು ಯಾಕೆ ಭಿನ್ನ ಯೋಚನೆ ಮಾಡುತ್ತೀರಿ?
ಬಿಜೆಪಿಯಲ್ಲೂ ಮುಸ್ಲಿಂ ನಾಯಕರಿದ್ದಾರೆ. ನಾವು ದೇಶ ಬಾಂಧವರೆಲ್ಲ ಒಂದು. ನಾನು ಪ್ರಚಾರ ಮಾಡುತ್ತಿರುವುದು ಗುಜರಾತನ್ನೇ ಹೊರತು ನರೇಂದ್ರ ಮೋದಿಯವರನ್ನಲ್ಲ. ಅಲ್ಲಿ ಮೋದಿ ಬದಲಿಗೆ ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ನಾನು ಇದನ್ನೇ ಮಾಡುತ್ತಿದ್ದೆ ಮತ್ತು ಮುಂದೆಯೂ ಅದನ್ನೇ ಮಾಡುತ್ತೇನೆ. ನನಗೆ ವ್ಯಕ್ತಿ ಮುಖ್ಯವಲ್ಲ, ನನ್ನ ದೇಶ ಮುಖ್ಯ.
* ಹಾಗಾದರೆ ನೀವು ತಪ್ಪು ಮಾಡಿಲ್ಲ?
- ನಾನೇನು ತಪ್ಪು ಮಾಡಿದ್ದೇನೆ ಎಂದು ನೀವೇ ಹೇಳಿ. ನನ್ನ ದೇಶದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಪ್ರಚಾರ ನೀಡಲು ಮುಂದಾದರೆ ಅದರಲ್ಲಿ ತಪ್ಪೇನಿದೆ? ನಾನು ಇದಕ್ಕಾಗಿ 150 ಕೋಟಿ ರೂಪಾಯಿ ಹಣ ಪಡೆದಿದ್ದೇನೆ ಎಂದು ಆರೋಪಿಸುವವರು ಮುಂದೆ ಬರಲಿ. ನಯಾ ಪೈಸೆ ಇದಕ್ಕೆ ನಾನು ಪಡೆದಿಲ್ಲ, ಉಚಿತವಾಗಿ ಮಾಡಿದ್ದೇನೆ ಎಂಬುದನ್ನು ರುಜುವಾತುಪಡಿಸುವ ದಾಖಲೆಗಳು ನನ್ನಲ್ಲಿವೆ.
* ನಿಮ್ಮ ಮುಸ್ಲಿಂ ಅಭಿಮಾನಿಗಳು ಬೇಸರಗೊಳ್ಳಬಹುದು ಎಂದೂ ನೀವು ಚಿಂತಿತರಾಗಿಲ್ಲ?
- ಅಸಮಾಧಾನಗೊಂಡವರು ಎಲ್ಲಿದ್ದಾರೆ? ನನ್ನ ಅಭಿಮಾನಿಗಳ ವೃಂದ ಹೆಚ್ಚಾಗಬೇಕೆಂದು ನಾನಿದನ್ನು ಮಾಡುತ್ತಿಲ್ಲ. ನನ್ನ ಅಭಿಮಾನಿಗಳು ನನ್ನ ಚಿತ್ರಗಳನ್ನು ನೋಡುತ್ತಾರೆ. ಅವರಿಗೆ ಇಷ್ಟವಾದರೆ ಮತ್ತೊಮ್ಮೆ ನೋಡುತ್ತಾರೆ. ಅವರು ನಾನು ಯಾರ ಜತೆಗೆ, ಯಾವ ರಾಜಕೀಯ ಪಕ್ಷದ ಜತೆಗೆ ಆಸಕ್ತಿ ಹೊಂದಿದ್ದೇನೆ ಎಂಬುವುದರ ಬಗ್ಗೆ ಯೋಚಿಸಲಾರರು. ನಾನು ಕೋಮುವಾದಿಯಲ್ಲ. ಈ ದೇಶದ ಜಾತ್ಯತೀತ ಸಿದ್ಧಾಂತಗಳಲ್ಲಿ ನಂಬಿಕೆ ಹೊಂದಿರುವ ವ್ಯಕ್ತಿ ನಾನು.
* ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಮತ್ತೆ ಪ್ರವೇಶ ಮಾಡುವ ಬಗ್ಗೆ?