ಶನಿವಾರ ಮುಂಜಾನೆ ಮುಂಬೈಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಖಾಸಗಿ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಜೆಟ್ ಏರ್‌ವೇಸ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್ ವಿಮಾನ ಯಾನ ಸಂಸ್ಥೆಗಳ ಎರಡು ವಿಮಾನಗಳ ನಡುವೆ ಶನಿವಾರ ಮುಂಜಾನೆ ಎರಡು ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ.
ಮುಂಬೈಯಿಂದ ಮಸ್ಕತ್‌ಗೆ ಹೊರಟಿದ್ದ 9W540 ಜೆಟ್ ವಿಮಾನವು ಟೇಕ್ ಆಫ್ ಆಗಲು ಸಿದ್ಧವಾಗುತ್ತಿತ್ತು. ಈ ಸಂದರ್ಭದಲ್ಲಿ ಕಿಂಗ್‌ಫಿಶರ್ ವಿಮಾನದ ಹಿಂಬದಿಗೆ ಜೆಟ್ ಒರೆಸಿಕೊಂಡು ಹೋಗಿತ್ತು.
ಜೆಟ್ ವಿಮಾನವು ಪಾರ್ಕಿಂಗ್ ನಂ.85ರಿಂದ ಹೊರಡುವ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ನಂ.84ರಲ್ಲಿ ನಿಂತಿದ್ದ ಕಿಂಗ್‌ಫಿಶರ್ ವಿಮಾನದ ಬಾಲಕ್ಕೆ ಡಿಕ್ಕಿ ಹೊಡೆದಿತ್ತು. ಜೆಟ್ ವಿಮಾನದಲ್ಲಿ ಪ್ರಯಾಣಿಕರಿದ್ದರು, ಆದರೆ ಕಿಂಗ್‌ಫಿಶರ್ ಖಾಲಿಯಾಗಿತ್ತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ಎರಡೂ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕುರಿತು ತನಿಖೆ ನಡೆಸಲು ಆದೇಶ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.
ಘಟನೆಯಲ್ಲಿ ಯಾವುದೇ ಪ್ರಮಾಣಿಕರು ಅಥವಾ ಸಿಬ್ಬಂದಿಗಳಿಗೆ ಗಾಯವಾಗಿಲ್ಲ. ಆದರೆ ವಿಮಾನಗಳು ಜಖಂಗೊಂಡಿವೆಯೇ ಎಂಬ ಬಗ್ಗೆ ವಿಮಾನ ಯಾನ ಸಂಸ್ಥೆಗಳು ಯಾವುದೇ ಮಾಹಿತಿ ನೀಡಿಲ್ಲ.