15ರ ಹರೆಯದ ಬಾಲಕಿ ಶಾಲೆಯಿಂದ ಬೋರಿ ಪ್ರದೇಶದಲ್ಲಿರುವ ಮನೆಗೆ ಬಂದಿದ್ದಳು. ಆ ಸಂದರ್ಭದಲ್ಲಿ ಆಕೆಯ ತಂದೆ ಸತೀಶ್ ಜಾರೋಂಡೆ ಆಕೆಯ ಕೋಣೆಯೊಳಕ್ಕೆ ಪ್ರವೇಶಿಸಿ, ಮಗಳ ಮೇಲೆ ಮೇಲೆ ಬಲಾತ್ಕಾರ ನಡೆಸಲು ಮುಂದಾಗಿದ್ದ. ತಂದೆಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕಾಮುಕ ಅಪ್ಪ ಹಿಡಿತವನ್ನು ಬಿಡಲೇ ಇಲ್ಲ. ಇದರಿಂದ ತಾಳ್ಮೆಗೆಟ್ಟ ಹುಡುಗಿ ಪಕ್ಕದಲ್ಲಿಯೇ ಇದ್ದ ಕೈ ಹಾರೆಯಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಳು. ಹೊಡೆತಕ್ಕೆ 47ರ ಹರೆಯದ ಅಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.
ನಂತರ ಮಾರ್ಕೆಟ್‌ಗೆ ಹೋಗಿದ್ದ ಮಲ ತಾಯಿ ಮನೆಗೆ ಬಂದಾಗ ಬಾಲಕಿ ಆಘಾತದಿಂದ ಕುಳಿತಿದ್ದನ್ನು ಗಮನಿಸಿದ್ದಳು, ಪಕ್ಕದಲ್ಲಿಯೇ ಗಂಡನ ಶವ ನೆಲದ ಮೇಲೆ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಳು. ಕೂಡಲೇ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ಬಾಲಕಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬಾಲಕಿಯನ್ನು ಬಾಲಪರಾಧಿ ಕೋರ್ಟ್‌ಗೆ ಹಾಜರುಪಡಿಸಿರುವುದಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಕೈಲಾಶ್ ಟಾಂಕರ್ ಹೇಳಿದ್ದಾರೆ. ಮೃತ ಸತೀಶ್ ವಿಪರೀತ ಲೈಂಗಿಕ ಕಿರುಕುಳದ ವ್ಯಕ್ತಿಯಾಗಿದ್ದು, ಆತ ಹಲವಾರು ಹೆಂಗಸರ ಜೊತೆ ಅಕ್ರಮ ಸಂಬಂಧ ಹೊಂದಿರುವುದಾಗಿಯೂ ವಿವರಿಸಿರುವ ಕೈಲಾಶ್, ಆತ ಐವರ ಜತೆ ಮದುವೆಯಾಗಿರುವುದಾಗಿಯೂ ತಿಳಿಸಿದ್ದಾರೆ.
ಈತ ತನ್ನ ಮೂರನೇಯ ಪತ್ನಿಯನ್ನು ಕೊಂದಿದ್ದು, ಆಕೆಯ ಮಗಳ ಮೇಲೆಯೇ ಅತ್ಯಾಚಾರ ನಡೆಸಲು ಯತ್ನಿಸಿ ಸಾವನ್ನಪ್ಪಿರುವುದಾಗಿ ಅವರು ವಿವರಿಸಿದ್ದಾರೆ.