ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚೀನಾದ ಕಂತ್ರಿ ಬುದ್ಧಿ; ಅರುಣಾಚಲ ಚೀನಾಕ್ಕೆ ಸೇರಿದ್ದಂತೆ! (China | online mapping | Arunachal | Map World | Aksai Chin)
ಒಂದೆಡೆ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ ತನ್ನ ತಗಾದೆ ಮುಂದುವರಿಸುತ್ತಿರುವ ನಡುವೆಯೇ ಮತ್ತೊಂದೆಡೆ ಚೀನಾ ಕೂಡ ಇಂತಹದ್ದೇ ಕ್ಯಾತೆ ತೆಗೆಯುತ್ತಲೇ ಇದೆ. ಇದೀಗ ಅರುಣಾಚಲ ಪ್ರದೇಶ, ಲಡಾಕ್‌ನ ಅಕ್ಸಾಯಿ ಚಿನ್ ಪ್ರದೇಶಗಳು ಚೀನಾದ ಭಾಗ ಎಂದು ಆನ್‌ಲೈನ್ ನಕ್ಷೆಯಲ್ಲಿ ಹೇಳಿಕೊಂಡಿದೆ!
ಗೂಗಲ್ ಅರ್ಥ್‌ಗೆ ಸೆಡ್ಡು ಹೊಡೆಯಲು ಚೀನಾ ತನ್ನ ಭಾಷೆಯಲ್ಲೇ ಅನಾವರಣಗೊಳಿಸಿರುವ 'ಮ್ಯಾಪ್ ವರ್ಲ್ಡ್'ನಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯಿ ಚಿನ್ ಪ್ರದೇಶವನ್ನು ತನ್ನ ಗಡಿಯೊಳಗೆ ಸೇರಿಸಿಕೊಂಡಿದೆ. ಅಕ್ಸಾಯ್ ಚಿನ್ ಪ್ರದೇಶ ಜಮ್ಮು-ಕಾಶ್ಮೀರದ ಲಡಾಖ್ ವಲಯಕ್ಕೆ ಸೇರಿದ್ದು ಎಂದು ಭಾರತ ಪ್ರತಿಪಾದಿಸುತ್ತಾ ಬಂದಿತ್ತು.
ಐ-ಫೋನ್ ಮತ್ತು ಮೊಬೈಲ್ ಅಂತರ್ಜಾಲ ಬಳಕೆದಾರರು ಈಗಾಗಲೇ ಈ ನಕ್ಷೆಯನ್ನು ಬಳಸಲಾರಂಭಿಸಿದ್ದಾರೆ. ಇದರಲ್ಲಿ ಚೀನಾವು ಅರುಣಾಚಲವನ್ನು ಒಳಗೊಂಡ ಜಾಗವನ್ನು ತನ್ನ ಗಡಿಯೊಳಕ್ಕೆ ಸೇರಿಸಿಕೊಂಡಿದೆ ಎಂದು ನಕ್ಷೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಭಾರತದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ ಗಿಲ್ಗಿಟ್ ಹಾಗೂ ಬಾಲ್ಟಿಸ್ತಾನ್‌ಗಳನ್ನು ಭಾರತದ ಪ್ರದೇಶಗಳು ಎಂದು ಒಪ್ಪಲು ಚೀನಾಕ್ಕೆ ಸಾಧ್ಯವೇ ಇಲ್ಲವಂತೆ. ಹಾಗಾಗಿ ಆ ಪ್ರದೇಶಗಳನ್ನು ಪಾಕ್ ಆಕ್ರಮಿತ ಎಂದು ನಕ್ಷೆಯಲ್ಲಿ ಗುರುತಿಸಿದೆ. ಅಲ್ಲದೇ, ಜಗತ್ತಿನ ಬೇರೆ ರಾಷ್ಟ್ರಗಳ ಸ್ಥಳಗಳ ಹೆಸರನ್ನೂ ಚೀನಿ ಭಾಷೆಯಲ್ಲಿ ಬರೆದಿರುವ ಬಗ್ಗೆ ಚೀನಾದಲ್ಲೇ ಅಪಸ್ವರ ಎದ್ದಿದೆ. ಈ ಹಿನ್ನೆಲೆಯಲ್ಲಿ ಐ ಪೋನ್ ಮಾರಾಟ ಮಾಡಿರುವ ಕೆಲವು ಕಂಪೆನಿಗಳು ಈ ಮೊಬೈಲ್‌ಗಳನ್ನು ವಾಪಸ್ ತೆಗೆದುಕೊಳ್ಳಲು ಯೋಚಿಸುತ್ತಿದೆ.
ಗಡಿ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ನಡುವೆ ಈಗಾಗಲೇ ಸುಮಾರು 13 ಸುತ್ತಿನ ಮಾತುಕತೆಗಳು ನಡೆದಿದ್ದರೂ ಕೂಡ ಅದು ಯಾವುದೇ ಫಲ ನೀಡಿಲ್ಲ. ಒಟ್ಟಿನಲ್ಲಿ ಪಾಕ್ ಮತ್ತು ಚೀನಾ ಭಾರತದ ಸ್ಥಳಗಳನ್ನು ಆಕ್ರಮಿಸಿಕೊಳ್ಳಲು ವ್ಯವಸ್ಥಿತ ಸಂಚು ನಡೆಸುತ್ತಿರುವುದು ಸ್ಪಷ್ಟವಾದಂತಾಗಿದೆ.