ಬಿಹಾರ ವಿಧಾನಸಭಾ ಕ್ಷೇತ್ರದ 45 ಸ್ಥಾನಗಳಿಗೆ ಎರಡನೇ ಹಂತದ ಮತದಾನ ಭಾನುವಾರ ನಡೆಯುತ್ತಿದ್ದ ವೇಳೆ ನಕ್ಸಲೀಯರು ಏಕಾಏಕಿ ಮತಗಟ್ಟೆ ಮೇಲೆ ದಾಳಿ ನಡೆಸಿ ಮತಯಂತ್ರಗಳಿಗೆ ಬೆಂಕಿಹಚ್ಚಿದ್ದಾರೆ. ಮತ್ತೊಂದೆಡೆ ಸಚಿವರೊಬ್ಬರು ದಾಳಿಯಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ಮುಜಾಫರ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.
ಮಾವೋವಾದಿಗಳ ಅಟ್ಟಹಾಸ ಹೆಚ್ಚಿರುವ ರಾಜ್ಯದ ಆರು ಜಿಲ್ಲೆಗಳ 45 ವಿಧಾನಸಭಾ ಸ್ಥಾನಗಳಿಗೆ ಇಂದು ಬೆಳಿಗ್ಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ. ನಕ್ಸಲ್ ಬೆದರಿಕೆಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತದಾನ ಆರಂಭಗೊಂಡ ಬೆನ್ನಲ್ಲೇ ರುನಿಸೈದ್‌ಪುರ ಕ್ಷೇತ್ರದ ಸುಬೈಗಢ್ ಮತಗಟ್ಟೆ ಮೇಲೆ ಭಾರೀ ಶಸ್ತ್ರ ಸಜ್ಜಿತ ನಕ್ಸಲೀಯರು ದಾಳಿ ನಡೆಸಿ ಎಲೆಕ್ಟ್ರಾನಿಕ್ ಮತಯಂತ್ರವನ್ನು ಸುಟ್ಟು ದಾಂಧಲೆ ನಡೆಸಿದ್ದಾರೆ. ಅಲ್ಲದೇ ಮೂವರು ಚುನಾವಣಾಧಿಕಾರಿಗಳು ನಾಪತ್ತೆಯಾಗಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ರಾಥಿ ತಿಳಿಸಿದ್ದಾರೆ.
ಚುನಾವಣಾಧಿಕಾರಿಗಳಾದ ಬಲ್‌ದೇವೋ ಪ್ರಸಾದ್ ಯಾದವ್, ಕೆ.ಎನ್.ಸಿಂಗ್ ಹಾಗೂ ಸತ್ಯೇಂದ್ರಾ ಪಾಟೇಲ್ ನಕ್ಸಲ್ ದಾಳಿಯ ನಂತರ ನಾಪತ್ತೆಯಾಗಿರುವುದಾಗಿ ಚುನಾವಣಾಧಿಕಾರಿ ಶಿವ್‌ದಾನಿ ಸಿಂಗ್ ವಿವರಿಸಿದ್ದಾರೆ. ಮತಯಂತ್ರವನ್ನು ಶೀಘ್ರವೇ ಬದಲಾಯಿಸಿ, ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.
ಮತ್ತೊಂದೆಡೆ ಮುಜಾಫರ್‌ಪುರ್ ಜಿಲ್ಲೆಯ ಮಿನಾಪುರ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಯು ಸಚಿವ ದಿನೇಶ್ ಪ್ರಸಾದ್ ಕುಶ್‌ವಾಹಾ ಅವರ ವಾಹನದ ಮೇಲೆ ಪಕ್ಷೇತರ ಅಭ್ಯರ್ಥಿ ಮಾಧವಿ ಚಂದ್ರಾ ಅವರ ಬೆಂಬಲಿಗರು ಏಕಾಏಕಿ ದಾಳಿ ನಡೆಸಿದ್ದರು. ಆದರೆ ದಾಳಿಯಲ್ಲಿ ದಿನೇಶ್ ಅಪಾಯದಿಂದ ಪಾರಾಗಿದ್ದು, ಅವರ ಅಂಗರಕ್ಷಕರು ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಕ್ಸಲ್ ಪ್ರಭಾವ ಹೊಂದಿರುವ ಶೆಯೋಹಾರ್, ಸಮಸ್ಟಿಪುರ್, ದರ್ಬಾಂಗಾ, ಸೀತಾಮಾರಿ, ಮುಜಾಫರ್‌ಪುರ್ ಮತ್ತು ಪೂರ್ವ ಚಂಪಾರಣ್ಯ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದು, ಮತದಾನ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 3ಗಂಟೆ ತನಕ ನಡೆಯಲಿದೆ.