ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಪಾಕಿಸ್ತಾನ ಬೇಕೇ ಬೇಕು -- ಹೀಗೆಂದು ಹೇಳಿರುವುದು ಕೇಂದ್ರ ಸರಕಾರ ನೇಮಕಗೊಳಿಸಿರುವ ಸಂಧಾನಕಾರರ ತಂಡದ ಮುಖ್ಯಸ್ಥ, ಹಿರಿಯ ಪತ್ರಕರ್ತ ದಿಲೀಪ್ ಪಡ್ಗಾಂವ್ಕರ್. ಇದಕ್ಕೆ ಬಿಜೆಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿಯವರ ಕಚೇರಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿವೆ.
ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಗೊಳಿಸುವ ನಿಟ್ಟಿನಲ್ಲಿ ಪ್ರತ್ಯೇಕತಾವಾದಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಅಭಿಪ್ರಾಯ ಕ್ರೋಢೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಪಡ್ಗಾಂವ್ಕರ್, ಮಾಹಿತಿ ಆಯುಕ್ತ ಎಂ.ಎಂ. ಅನ್ಸಾರಿ ಮತ್ತು ಶೈಕ್ಷಣಿಕ ತಜ್ಞ ರಾಧಾ ಕುಮಾರ್ ಅವರನ್ನು ಸಂವಾದಕಾರರನ್ನಾಗಿ ನೇಮಿಸಿತ್ತು.
PTI
ಈ ಉನ್ನತ ಮಟ್ಟದ ಸಮಿತಿಯು ಕಾಶ್ಮೀರ ಪ್ರವೇಶಿಸಿದೆ. ಶ್ರೀನಗರ ತಲುಪುತ್ತಿದ್ದಂತೆ ಸಮಿತಿಯ ಮುಖ್ಯಸ್ಥ ಬಾಂಬ್ ಹಾಕಿದ್ದಾರೆ. ಪಾಕಿಸ್ತಾನವಿಲ್ಲದೆ ಸಮಸ್ಯೆಗೆ ಪರಿಹಾರವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ತನ್ನನ್ನು ನೇಮಕಗೊಳಿಸಿರುವುದು ಭಾರತವೋ ಇಲ್ಲ ಪಾಕಿಸ್ತಾನವೋ ಎಂಬ ಸಂಶಯ ಹುಟ್ಟಿಸುವಂತೆ ಮಾಡಿದ್ದಾರೆ.
ಕಾಶ್ಮೀರ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದು ಹೇಗೆ ಸಾಧ್ಯ ಎಂಬುದರ ಪರಿಶೀಲನೆಗೆ ನಾವು ಇಲ್ಲಿಗೆ ಬಂದಿದ್ದೇವೆ. ಆದರೆ ಪಾಕಿಸ್ತಾನದ ಪಾಲ್ಗೊಳ್ಳುವಿಕೆಯಿಲ್ಲದೆ ಇದಕ್ಕೆ ಶಾಶ್ವತ ಪರಿಹಾರ ದೊರಕದು ಎಂದು ಪಡ್ಗಾಂವ್ಕರ್ ಹೇಳಿರುವುದು.
ಉಗ್ರರನ್ನು ಭೇಟಿ ಮಾಡಿದ ಸಂವಾದಕರು... ಸಂವಾದಕರಾದ ಪಡ್ಗಾಂವ್ಕರ್, ರಾಧಾ ಕುಮಾರ್ ಮತ್ತು ಅನ್ಸಾರಿಯವರು ಭಾನುವಾರ ಶ್ರೀನಗರದಲ್ಲಿನ ಜೈಲಿನಲ್ಲಿರುವ ಉಗ್ರರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸಂಧಾನದಲ್ಲಿ ಹೇಳಿರುವಂತೆ ರಾಜಕೀಯ ಪಕ್ಷಗಳು, ಪ್ರತ್ಯೇಕತಾವಾದಿಗಳು ಸೇರಿದಂತೆ ಎಲ್ಲಾ ವರ್ಗಗಳ ಅಭಿಪ್ರಾಯ ಸಂಗ್ರಹದ ಹೊಣೆ ಹೊತ್ತಿರುವ ಸಮಿತಿಯು, ಅಲ್-ಬದ್ರ್, ಹಿಜ್ಬುಲ್ ಮುಜಾಹಿದೀನ್, ಲಷ್ಕರ್ ಇ ತೋಯ್ಬಾ, ಜೈಶ್ ಇ ಮೊಹಮ್ಮದ್ ಉಗ್ರಗಾಮಿ ಸಂಘಟನೆಗಳ ಉನ್ನತ ನಾಯಕರುಗಳನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ.
ಮೂಲಗಳ ಪ್ರಕಾರ ಭಯೋತ್ಪಾದಕರು ಕೂಡ ಪಾಕಿಸ್ತಾನ ಇರದೆ ಶಾಂತಿ ಅಸಾಧ್ಯ ಎಂದಿದ್ದಾರೆ. ಕಾಶ್ಮೀರ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಬೇಕಾದಲ್ಲಿ ಪಾಕಿಸ್ತಾನ ಪಾಲ್ಗೊಳ್ಳುವುದು ಅಗತ್ಯ ಎಂದು ಉಗ್ರರು ಸಮಿತಿಗೆ ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.
ಬಿಜೆಪಿ ವಾಗ್ದಾಳಿ... ಪಡ್ಗಾಂವ್ಕರ್ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿರುವ ಪ್ರಮುಖ ಪ್ರತಿಪಕ್ಷ ಬಿಜೆಪಿ, ಇದು ಸಮಿತಿಯ ವಿಚಾರಣಾ ವ್ಯಾಪ್ತಿಯ ಭಾಗವೇ ಎಂದು ಪ್ರಶ್ನಿಸಿದೆ. ಅಲ್ಲದೆ ಈ ಸಂಬಂಧ ಪ್ರಧಾನ ಮಂತ್ರಿಯವರ ಕಚೇರಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದೆ.
ಸಂಧಾನಕಾರರಿಗೆ ನೀಡಲಾಗಿರುವ ಜವಾಬ್ದಾರಿಯ ಭಾಗವೇ ಇದು ಎಂಬುದನ್ನು ಪ್ರಧಾನ ಮಂತ್ರಿಯವರ ಕಚೇರಿ ತಕ್ಷಣವೇ ಸ್ಪಷ್ಟಪಡಿಸಬೇಕು. ಸಂಧಾನಕಾರರು ತಮ್ಮ ಕೆಲಸವನ್ನು ಆರಂಭಿಸುವ ಮೊದಲೇ ಈ ವಿಚಾರವನ್ನು ಅಂತಾರಾಷ್ಟ್ರೀಕರಣಗೊಳಿಸುವ ಅನಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಇದು ತೀರಾ ಆಘಾತಕಾರಿ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪ್ರತಿಕ್ರಿಯೆಗೆ ಕಾಂಗ್ರೆಸ್ ನಕಾರ... ಪಡ್ಗಾಂವ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಆಡಳಿತ ಪಕ್ಷ ಕಾಂಗ್ರೆಸ್ ನಿರಾಕರಿಸಿದೆ. ಇತರ ವಿಚಾರಗಳೆಲ್ಲ ಬಂದಾಗ ಮೇಲೆ ಬಿದ್ದು ಹೇಳಿಕೆ ನೀಡುವ ಮನೀಷ್ ತಿವಾರಿ ಈ ವಿಚಾರದಲ್ಲಿ ಸುಮ್ಮನಿದ್ದಾರೆ.
ನೀಡಿರುವ ಅಥವಾ ನೀಡದೇ ಇರುವ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಲು ಪಡ್ಗಾಂವ್ಕರ್ ಸಮರ್ಥ ವ್ಯಕ್ತಿ. ಕಾಂಗ್ರೆಸ್ ಪಕ್ಷದ ನಿಲುವು ತಿಳಿಸುವುದಾದರೆ, ಈ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಅಗತ್ಯವಾಗಿರುವ -- ಪಾಕಿಸ್ತಾನವು ಅಕ್ರಮವಾಗಿ ವಶಪಡಿಸಿಕೊಂಡಿರುವ ಜಮ್ಮು-ಕಾಶ್ಮೀರದ ಭಾಗಗಳ ಅಪೂರ್ಣ ವಿಭಜನೆ ಕುರಿತು ಸಂಸತ್ತು ತೆಗೆದುಕೊಳ್ಳುವ ಒಕ್ಕೊರಲಿನ ನಿರ್ಣಯವನ್ನು ನಾವು ಬೆಂಬಲಿಸುತ್ತೇವೆ ಎಂದರು.