ಗಾಂಧಿ-ನೆಹರೂ ಕುಟುಂಬ ರಾಜಕಾರಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಂಯುಕ್ತ ಜನತಾದಳ ವರಿಷ್ಠ ಶರದ್ ಯಾದವ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು ಗಂಗಾ ನದಿಗೆ ಎಸೆಯಿರಿ ಎಂದು ಕರೆ ನೀಡಿದ್ದಾರೆ.
ಬಿಹಾರದ ಫಾತ್ವಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದ ಅವರು ಭಾರತದ ರಾಜಕೀಯ ವ್ಯವಸ್ಥೆ ನಿಮಗೆಷ್ಟು ಗೊತ್ತು ಎಂದು ರಾಹುಲ್ ಗಾಂಧಿಗೆ ಪ್ರಶ್ನೆ ಹಾಕಿದರು.
PTI
ಕೈ ಚಿಹ್ನೆಯನ್ನು (ಕಾಂಗ್ರೆಸ್ ಪಕ್ಷದ ಚಿಹ್ನೆ) ಹೊಂದಿರುವ ಈ ಮಂದಿ ಮತ್ತು ಕುಟುಂಬವು ದೇಶವನ್ನು 50 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ ಎಂದು ಕಿಡಿ ಕಾರಿದ ಶರದ್ ಯಾದವ್, ನೆಹರೂ ಕುಟುಂಬಿಕರ ಹೆಸರುಗಳನ್ನು ನೇರವಾಗಿ ಪ್ರಸ್ತಾಪಿಸಿದರು.
ಮೋತಿಲಾಲ್, ಜವಾಹರಲಾಲ್, ಇಂದಿರಾ ಗಾಂಧಿ, ಸೋನಿಯಾ ಗಾಂಧಿಯ ನಂತರ ಈಗ ರಾಹುಲ್ ಗಾಂಧಿ ಎಂಬ ಬಾಲಕನೂ ಅದೇ ಹಾದಿಯಲ್ಲಿದ್ದಾರೆ ಎಂದು ತನ್ನ ಭಾಷಣದಲ್ಲಿ ಹೇಳಿದ ಯಾದವ್, ರಾಹುಲ್ ಸಾರ್ವಜನಿಕ ಸಮಾರಂಭಗಳಲ್ಲಿ ಭುಜವನ್ನು ಹಾರಿಸುವುದನ್ನು ಮಾಡಿ ತೋರಿಸುತ್ತಾ 'ಹೀಗೆ ಸಾಧಿಸಿ ಬಿಡುತ್ತಾರೆ' ಎಂದು ಅಣಕವಾಡಿದರು.
ರಾಹುಲ್ ಗಾಂಧಿಯನ್ನು ಗುರಿಯಾಗಿಟ್ಟುಕೊಂಡೇ ದಾಳಿ ಮುಂದುವರಿಸಿದ ಎನ್‌ಡಿಎ ಸಂಚಾಲಕರೂ ಆಗಿರುವ ಯಾದವ್, 'ಭಾರತದ ರಾಜಕೀಯ ವ್ಯವಸ್ಥೆಯ ಬಗ್ಗೆ ನಿಮಗೇನು ಗೊತ್ತು? ಯಾರೋ ಬರೆದು ಕೊಡುತ್ತಾರೆ, ಅದನ್ನು ನೀವು ವೇದಿಕೆಗಳಲ್ಲಿ ಓದುತ್ತೀರಿ... ನಿಮ್ಮನ್ನು ಎತ್ತಿ ಗಂಗಾ ನದಿಗೆ ಎಸೆದು ಬಿಡಬೇಕು. ಜನ ರೋಸಿ ಹೋಗಿದ್ದಾರೆ. ಇದು ನಮ್ಮ ದೇಶದ ದುರದೃಷ್ಟ..' ಎಂದರು.
ಕುಟುಂಬ ರಾಜಕಾರಣವನ್ನು ಮಾಡುತ್ತಿರುವ ಇತರ ರಾಜಕಾರಣಿಗಳನ್ನೂ ಇದೇ ಸಂದರ್ಭದಲ್ಲಿ ಯಾದವ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿಯೊಬ್ಬರೂ ಈಗ ವಂಶ ರಾಜಕಾರಣವನ್ನು ಮಾಡುತ್ತಿದ್ದಾರೆ. ತಮಿಳುನಾಡಿನ ಕಪ್ಪು ಕನ್ನಡಕಗಳನ್ನು ಹಾಕಿಕೊಂಡಿರುವ ವ್ಯಕ್ತಿಯನ್ನೇ ನೋಡಿ. ಇದರ ವಿರುದ್ಧ ಎಷ್ಟು ಮಂದಿ ಧ್ವನಿಯೆತ್ತುತ್ತಾರೆ ಎಂದು ಡಿಎಂಕೆ ವರಿಷ್ಠ ಎಂ. ಕರುಣಾನಿಧಿಯವರನ್ನು ಉಲ್ಲೇಖಿಸುತ್ತಾ ವಾಗ್ದಾಳಿ ನಡೆಸಿದರು.