ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮ್ಯಾಜಿಕ್ ಎಲ್ಲಾ ಕಡೆ ನಡೆಯುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಬಿಹಾರ ವಿಧಾನಸಭಾ ಚುನಾವಣೆಗಾಗಿ ಪ್ರಚಾರ ಮಾಡುವ ಸಾಧ್ಯತೆಗಳನ್ನು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಕ್ಷೀಣಗೊಳಿಸಿದ್ದಾರೆ.
PTI
ಆದರೆ ಈ ಸಂಬಂಧ ಬಿಜೆಪಿಯು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒತ್ತಡಕ್ಕೆ ಮಣಿದಿದೆ ಎಂಬ ವಾದವನ್ನು ಒಪ್ಪಿಕೊಂಡಿಲ್ಲ. ಮೋದಿ ಪ್ರಚಾರದ ಬಗ್ಗೆ ಜೆಡಿಯು ಯಾವುದೇ ಷರತ್ತುಗಳನ್ನು ವಿಧಿಸಿಲ್ಲ ಎಂದು ಸುಷ್ಮಾ ಸ್ಪಷ್ಟಪಡಿಸಿದ್ದಾರೆ.
2005ರ ಬಿಹಾರ ವಿಧಾನಸಭಾ ಚುನಾವಣೆ ಮತ್ತು 2009ರ ಮಹಾಚುನಾವಣೆಯನ್ನು ಉಲ್ಲೇಖಿಸಿದ ಅವರು, ಈ ಹಳೆ ವ್ಯವಸ್ಥೆಯನ್ನೇ ಮುಂದುವರಿಸಿದರೆ ಉತ್ತಮ ಎಂಬ ನಿರ್ಧಾರಕ್ಕೆ ಬಿಜೆಪಿ ಬಂದಿದೆ ಎಂದರು.
ಮೋದಿಯವರ ಮ್ಯಾಜಿಕ್ ಮತ್ತು ಚರಿಷ್ಮಾ ಗುಜರಾತಿನಲ್ಲಿ ಕೆಲಸ ಮಾಡಿದೆ. ಆದರೆ ಪ್ರತಿಯೊಬ್ಬರ ಮ್ಯಾಜಿಕ್ ಎಲ್ಲೆಡೆ ಕೆಲಸ ಮಾಡಬೇಕೆಂಬ ಅವಶ್ಯಕತೆಯಿಲ್ಲ. ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಸುಶೀಲ್ ಕುಮಾರ್ ಮೋದಿಯವರ ಮ್ಯಾಜಿಕ್ ಕೆಲಸ ಮಾಡುತ್ತಿದೆ. ಪ್ರಗತಿಯನ್ನು ಮುನ್ನಡೆಸಲು ನಮ್ಮ ಗೆಲುವು ಖಚಿತ ಎಂಬುದು ಭರವಸೆ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಸುಷ್ಮಾ ತಿಳಿಸಿದರು.
ಬಿಹಾರದಲ್ಲಿ ನರೇಂದ್ರ ಮೋದಿ ಪ್ರಚಾರ ಮಾಡುವ ಅಥವಾ ಮಾಡದೇ ಇರುವ ಬಗ್ಗೆ ನಿತೀಶ್ ನಮ್ಮ ಮುಂದೆ ಯಾವುದೇ ಷರತ್ತುಗಳನ್ನು ಇಟ್ಟಿಲ್ಲ. ಬಿಹಾರದಲ್ಲಿ ಯಾರು ಪ್ರಚಾರ ಮಾಡಬೇಕು ಮತ್ತು ಮಾಡಬಾರದು ಎನ್ನುವ ಸಂಪೂರ್ಣ ನಿರ್ಧಾರ ಬಿಜೆಪಿಗೆ ಬಿಟ್ಟದ್ದು ಎಂದರು.
ಜೆಡಿಯು ಮತ್ತು ಬಿಜೆಪಿಯ ಸಿದ್ಧಾಂತಗಳು ಬೇರೆ ಬೇರೆ, ಎರಡರ ತತ್ವ ಸಿದ್ಧಾಂತಗಳಿಗೆ ಸಂಬಂಧವಿಲ್ಲ ಎಂಬ ಮುಖ್ಯಮಂತ್ರಿ ನಿತೀಶ್ ಹೇಳಿಕೆಯ ಕುರಿತು ಪ್ರಶ್ನಿಸಿದಾಗ, 'ಎರಡೂ ಪಕ್ಷಗಳ ಸಿದ್ಧಾಂತಗಳು ಒಂದೇ ಆಗಿದ್ದರೆ ಎರಡೂ ಪಕ್ಷಗಳು ವಿಲೀನವಾಗಬಹುದಲ್ಲವೇ?' ಎಂದು ಮರು ಪ್ರಶ್ನೆ ಹಾಕಿದರು.