ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋವು ದೇವರಾದರೆ ಹಾಲು ಕುಡಿಯುವುದು ಯಾಕೋ? (Cow | Tripura | cattle | Tribals)
Bookmark and Share Feedback Print
 
ಕೋಳಿ ಮೊಟ್ಟೆ ಮತ್ತು ದನದ ಹಾಲು ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಎನ್ನುವ ಜಿಜ್ಞಾಸೆಗಳು ಇನ್ನೂ ಪರಿಹಾರ ಕಂಡಿಲ್ಲ. ಗೋವು ದೇವರಾದರೆ ಅದರ ಹಾಲು ಕುಡಿಯುವುದು ಎಷ್ಟು ಸರಿ ಎಂಬ ಪ್ರಶ್ನೆ ಇಂತಹ ಹೊತ್ತಿನಲ್ಲಿ ಬಂದರೆ ಹೇಗಿರುತ್ತದೆ?
PTI

ಇಲ್ಲಿ ನಮ್ಮ ಮುಂದೆ ಈಗ ಪ್ರಶ್ನೆಯಿಲ್ಲ, ಉತ್ತರ ಮಾತ್ರ ಇದೆ. ಹೌದು, ತ್ರಿಪುರಾದ ಒಂದು ಹಳ್ಳಿಯಲ್ಲಿ ಆಕಳನ್ನು ದೇವರೆಂದೇ ಪೂಜಿಸುತ್ತಾರೆ. ವಿಶೇಷವೆಂದರೆ ಅದರ ಹಾಲನ್ನು ಮಾತ್ರ ಕುಡಿಯುತ್ತಿಲ್ಲ. ಅದರ ಮೇಲೆ ಸಂಪ್ರದಾಯಬದ್ಧ ನಿಷೇಧವಿದೆ.

ರಾಜಧಾನಿ ಅಗರ್ತಲಾದಿಂದ ದಕ್ಷಿಣಕ್ಕೆ 170 ಕಿಲೋ ಮೀಟರ್ ದೂರದಲ್ಲಿರುವ ಬಗ್ಮಾರಾ ಗ್ರಾಮದಲ್ಲಿ ಇಂತಹ ಒಂದು ವಿಚಿತ್ರ ಪದ್ಧತಿಯಿದೆ. ಅಚ್ಚರಿಯೆಂದರೆ ಪ್ರತಿ ಮನೆಯವರೂ ಕನಿಷ್ಠ ಒಂದಾದರೂ ಹಾಲು ಕರೆಯಬಹುದಾದ ದನವನ್ನು ಹೊಂದಿರುವುದು. ಆದರೆ ಹಾಲು ಮಾತ್ರ ಕರೆಯುತ್ತಿಲ್ಲ.

ನಾವು ಗೋವನ್ನು ದೇವರೆಂದು ಪರಿಗಣಿಸುತ್ತೇವೆ. ಹಾಗಾಗಿ ನಾವು ದನದಿಂದ ಹಾಲು ಕರೆಯುವುದಿಲ್ಲ ಎಂದು ಗ್ರಾಮದ ಮುಖ್ಯಸ್ಥ ರಂಜಿತ್ ತ್ರಿಪುರ ಹೇಳುತ್ತಾರೆ.

ಈ ಗ್ರಾಮದಲ್ಲಿ ಸುಮಾರು 356 ಕುಟುಂಬಗಳಿವೆ. ಪುರುಷರು, ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ 2,000ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಂಡುಕೋರರ ಉಪಟಳದಿಂದ ನಲುಗುತ್ತಿರುವ ಈ ಪ್ರದೇಶದ ಅಭಿವೃದ್ಧಿಗೆ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.

ಕರುವಿನ ತಾಯಿಯ ಹಾಲನ್ನು ಕಸಿದುಕೊಳ್ಳುವುದು ಪಾಪ. ಅಂತಹ ಪಾಪಿಯನ್ನು ದೇವರು ಕ್ಷಮಿಸುವುದಿಲ್ಲ ಎಂಬುದು ನಮ್ಮ ನಂಬಿಕೆ -- ಇದು 90ರ ಹರೆಯದ ಬುಡಕಟ್ಟು ಮುಖ್ಯಸ್ಥರ ಮುಗ್ಧ ಮಾತುಗಳು.

ಈ ಓಬೀರಾಯನ ಕಾಲದ ಅವೈಜ್ಞಾನಿಕತೆಯನ್ನು ಹೋಗಲಾಡಿಸಲು ರಾಜ್ಯ ಆಡಳಿತವು ಹಲವು ಕ್ರಮಗಳನ್ನು ಕೈಗೊಂಡಿದೆ. ಹೈನುಗಾರಿಕೆಯ ಆಧುನಿಕ ವಿಧಾನಗಳನ್ನು ಬುಡಕಟ್ಟು ಜನರಿಗೆ ತರಬೇತಿ ನೀಡಲಾಗುತ್ತಿದೆ. ಆ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನೂ ಸುಧಾರಿಸುವ ಇರಾದೆ ಸರಕಾರದ್ದು. ಇತ್ತೀಚೆಗಷ್ಟೇ ಹಾಲು ಕರೆಯುವುದು ಮತ್ತು ಹಾಲು ಕೊಡುವ ದನಗಳನ್ನು ನೋಡಿಕೊಳ್ಳುವ ಕುರಿತು ಮಾಹಿತಿ ಕಾರ್ಯಾಗಾರವೊಂದನ್ನು ಏರ್ಪಡಿಸಲಾಗಿತ್ತು ಎಂದು ರಾಜ್ಯ ವಾರ್ತಾ ಇಲಾಖೆ ಅಧಿಕಾರಿ ಮನೋರಂಜನ್ ದಾಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ