ಭಾರತದ ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಹೆಸರನ್ನು ಪ್ರಕರಣದಿಂದ ಕೊನೆಗೂ ಕೈ ಬಿಡಲಾಗಿದೆ. ಪ್ರಭಾಕರನ್ ಸತ್ತ ಒಂದೂವರೆ ವರ್ಷದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ಸಿಬಿಐ ಸಲ್ಲಿಸಿರುವ ವರದಿಯನ್ನು ಆಧರಿಸಿ ಚೆನ್ನೈನಲ್ಲಿನ ಟಾಡಾ ಪ್ರಕರಣಗಳ ನ್ಯಾಯಾಲಯವು ಪ್ರಭಾಕರನ್ ವಿರುದ್ಧದ ಎಲ್ಲಾ ಆರೋಪಗಳನ್ನೂ ಕೈ ಬಿಟ್ಟಿದೆ.
ತಲೆ ಮರೆಸಿಕೊಂಡಿರುವ ಆರೋಪಿಗಳಾದ ಪ್ರಭಾಕರನ್ ಮತ್ತು ಪೊಟ್ಟು ಅಮ್ಮಾನ್ ಆಲಿಯಾಸ್ ಷಣ್ಮುಗನಾಥನ್ ಶಿವಶಂಕರನ್ ಮೇಲಿನ ಪ್ರಕರಣಗಳನ್ನು ಮತ್ತು ಆರೋಪಗಳನ್ನು ವಜಾಗೊಳಿಸಲಾಗಿದೆ ಎಂದು ನಿಯೋಜಿತ ನ್ಯಾಯಾಧೀಶ ಕೆ. ದಕ್ಷಿಣಮೂರ್ತಿ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
1991ರ ರಾಜೀವ್ ಹತ್ಯಾ ಪ್ರಕರಣದ ಭಾರೀ ಪಿತೂರಿಯನ್ನು ಹೊರಗೆಳೆಯುವ ಸಲುವಾಗಿ 1998ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಿಬಿಐಯ ಎಂಡಿಎಂಎ ವಿಭಾಗವು ಪ್ರಭಾಕರನ್ ಬಂಟ ಹಾಗೂ ಎಲ್‌ಟಿಟಿಇ ಬೇಹುಗಾರಿಕಾ ಮುಖ್ಯಸ್ಥ ಪೊಟ್ಟು ಅಮ್ಮಾನ್ ಬಗ್ಗೆ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಆತನ ಮೇಲಿನ ಪ್ರಕರಣ ಮತ್ತು ಆರೋಪಗಳನ್ನು ಕೈ ಬಿಡಲಾಗಿದೆ. ಭಾರತದ ಕಾನೂನುಗಳ ಪ್ರಕಾರ ಆರೋಪಿಯ ಸಾವಿನ ನಂತರ ಆತನ ಮೇಲಿನ ಆರೋಪಗಳು ತನ್ನಿಂತಾನೇ ಬಿದ್ದು ಹೋಗುತ್ತವೆ.
ಕಳೆದ ವರ್ಷದ ಮೇ 18ರಂದು ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್‌ನನ್ನು ಹತ್ಯೆಗೈಯುವುದರೊಂದಿಗೆ ಸೇನೆಯು ಮೇಲುಗೈ ಸಾಧಿಸಿದೆ ಎಂದು ಶ್ರೀಲಂಕಾ ಸರಕಾರ ಘೋಷಿಸಿತ್ತು. ಎಲ್‌ಟಿಟಿಇ ನಾಯಕನ ಮೃತದೇಹದ ಚಿತ್ರಗಳನ್ನು ಕೂಡ ಸೇನೆ ಬಿಡುಗಡೆ ಮಾಡಿತ್ತು. ಆದರೆ ಇದುವರೆಗೂ ಆತನ ಮರಣ ಪ್ರಮಾಣಪತ್ರವನ್ನು ಸರಕಾರ ಬಿಡುಗಡೆ ಮಾಡಿಲ್ಲ.
ಪೊಟ್ಟು ಅಮ್ಮಾನ್ ಪ್ರಕರಣವನ್ನು ಗಮನಕ್ಕೆ ತೆಗೆದುಕೊಳ್ಳುವುದಾದರೆ, ಆತನ ಮೃತದೇಹದ ಚಿತ್ರ ಅಥವಾ ಮರಣ ಪ್ರಮಾಣಪತ್ರವನ್ನು ಸರಕಾರ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ತಮಿಳು ವಲಯದಲ್ಲಿ ಇವರಿಬ್ಬರು ಇನ್ನೂ ಬದುಕಿದ್ದಾರೆ ಎಂಬ ಮಾತುಗಳಿಗೆ ಹೆಚ್ಚು ತೂಕವಿದೆ.
ಈ ನಡುವೆ 1989ರ ತಮಿಳು ರಾಜಕಾರಣಿಯೊಬ್ಬರ ಹತ್ಯಾ ಪ್ರಕರಣವೊಂದು ಕಳೆದ ವರ್ಷ ವಿಚಾರಣೆಗೆ ಬಂದಿದ್ದ ಸಂದರ್ಭದಲ್ಲಿ, ಆರೋಪಿಗಳಾದ ಪ್ರಭಾಕರನ್ ಮತ್ತು ಪೊಟ್ಟು ಅಮ್ಮಾನ್ ಸಾವನ್ನಪ್ಪಿದ್ದಾರೆ ಎಂದು ಶ್ರೀಲಂಕಾ ಪೊಲೀಸರು ತಮ್ಮ ವರದಿಯನ್ನು ಸಲ್ಲಿಸಿದ್ದರು.