ಕೇವಲ ಒಂದೂವರೆ ತಿಂಗಳ ಹೆಣ್ಣು ಮಗುವನ್ನು ಹೆತ್ತ ತಾಯಿಯೇ ಸೆಂಟ್ರಲ್ ಮುಂಬೈಯ ಪರೇಲ್‌ನಲ್ಲಿರುವ ಕೆಇಎಂ ಆಸ್ಪತ್ರೆಯ ಕಿಟಕಿಯಿಂದ ಹೊರಗೆ ಎಸೆದು ಹತ್ಯೆಗೈದಿರುವ ಅಮಾನವೀಯ ಘಟನೆ ನಡೆದಿರುವುದಾಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ದೀಪಿಕಾ ಪರ್ಮಾರ್ (26) ಎಂಬಾಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದಳು. ನಂತರ ಅಕ್ಟೋಬರ್ 20ರಂದು ತನ್ನ ಪತಿ ಮನೀಷ್ ಜತೆ ಕೆಇಎಂ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಮಂಗಳವಾರ ನಸುಕಿನ ವೇಳೆಯಲ್ಲಿ ದೀಪಿಕಾ ಒಂದು ಹೆಣ್ಣು ಮಗುವನ್ನು ಆಸ್ಪತ್ರೆಯ ಕಿಟಕಿಯಿಂದ ಹೊರಗೆಸೆದಿದ್ದಳು.
'ನಾವು ಅವಳಿ ಮಕ್ಕಳ ಜತೆ ತುಂಬಾ ಖುಷಿಯಿಂದ ಇದ್ದಿದ್ದೇವು. ಹೆಣ್ಣು ಮಗುವಿನ ಜನನದಿಂದಾಗಿ ನಮಗೆ ಯಾವುದೇ ತೊಂದರೆ ಇಲ್ಲವಾಗಿತ್ತು' ಎಂದು ಮನೀಷ್ ದುಃಖ ತಪ್ತರಾಗಿ ತಮ್ಮ ಆಘಾತವನ್ನು ಹೊರಹಾಕಿದ್ದಾರೆ. ದೀಪಿಕಾ ತನ್ನ ಹೆಣ್ಣು ಮಗುವನ್ನು ಆಸ್ಪತ್ರೆಯ ಕಿಟಕಿಯಿಂದ ಹೊರಗೆಸೆಯುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಆದರೆ ಆಕೆ ಯಾವ ಕಾರಣಕ್ಕೆ ಈ ರೀತಿ ಅಮಾನುಷ ನಿರ್ಧಾರ ಕೈಗೊಂಡಳು ಎಂಬ ಬಗ್ಗೆ ತಿಳಿದಿಲ್ಲ ಎಂದು ಕೆಇಎಂ ಡೀನ್ ಡಾ.ಸಂಜಯ್ ಓಕ್ ತಿಳಿಸಿದ್ದಾರೆ.
ಆರಂಭದಲ್ಲಿ ಈಕೆ ತನ್ನ ಮಗು ನಾಪತ್ತೆಯಾಗಿರುವುದಾಗಿ ತಿಳಿಸಿದ್ದಳು. ಆದರೆ ನಂತರ ತೀವ್ರ ವಿಚಾರಣೆ ನಂತರ ತಾನು ಮಗುವನ್ನು ಆಸ್ಪತ್ರೆಯ ಕಿಟಕಿಯಿಂದ ಹೊರಗೆಸೆದಿರುವುದಾಗಿ ವೈದ್ಯರಲ್ಲಿ ತಪ್ಪೊಪ್ಪಿಕೊಂಡಿದ್ದಳು. ನಂತರ ಮಗುವನ್ನು ಹುಡುಕಿ ತಂದು ಬದುಕಿಸಲು ಯತ್ನಿಸಿದರು ಯಾವುದೇ ಫಲಕಾರಿಯಾಗಲಿಲ್ಲ. ಯಾಕೆಂದರೆ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಡಾ.ಓಕ್ ವಿವರಿಸಿದ್ದಾರೆ.
ಹುಟ್ಟುವಾಗ ಕಡಿಮೆ ತೂಕವಿದ್ದ ಕಾರಣ ಅವಳಿ ಮಕ್ಕಳನ್ನು ಇನ್‌ಕ್ಯೂಬೇಟರ್‌ನಲ್ಲಿ ಇಡಲಾಗಿತ್ತು. ಆದರೆ ಆಕೆ ಒಂದು ಹೆಣ್ಣು ಮಗುವನ್ನು ಯಾಕೆ ಈ ರೀತಿ ಕೊಂದಿದ್ದಾಳೆ ಎಂಬುದು ತಿಳಿಯಲಿಲ್ಲ ಎಂದು ತಿಳಿಸಿರುವ ಓಕ್, ಇದೀಗ ಬೋಯಿವಾಡಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.