ಪ್ರತಿಪಕ್ಷಗಳ ಅಪಪ್ರಚಾರ, ಪಿತೂರಿಗಳ ಹೊರತಾಗಿಯೂ ಸ್ವಪಕ್ಷೀಯರೇ ಕರುಬುವಂತೆ ಅಭಿವೃದ್ಧಿ ಪಥದತ್ತ ಗುಜರಾತನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ಇತ್ತೀಚಿನ ವರ್ಷಗಳಲ್ಲಿ ಅಸಾಧ್ಯವಾದುದನ್ನೆಲ್ಲ ಸಾಧಿಸುತ್ತಾ ಬಂದವರು. ಈಗ ಅವರು ಕಣ್ಣು ನೆಟ್ಟಿರುವುದು ಸಮುದ್ರದತ್ತ, ಅದಕ್ಕೊಂದು ಅಣೆಕಟ್ಟನ್ನು ನಿರ್ಮಿಸಬೇಕು ಎಂದು ಪಣ ತೊಟ್ಟಿದ್ದಾರೆ.
PTI
ಸಾಗರಕ್ಕೆ ಅಣೆಕಟ್ಟೆಯನ್ನು ನಿರ್ಮಿಸುವ ಉದ್ದೇಶ ಒಂದೆರಡಲ್ಲ. 50,000 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚವಾಗಬಹುದಾದ ಈ ಬೃಹತ್ ಯೋಜನೆಯಿಂದ ವಿದ್ಯುತ್ ಉತ್ಪಾದನೆ, ಮೀನುಗಾರಿಕೆ, ಸಿಹಿ ನೀರಿನ ಜಲಾಶಯ, ಶಾರ್ಟ್ ಕಟ್ ರಸ್ತೆ-ರೈಲು ಮಾರ್ಗ ನಿರ್ಮಾಣ ಮುಂತಾದ ಲಾಭಗಳನ್ನು ಪಡೆದುಕೊಳ್ಳಬಹುದು ಎನ್ನುವುದು ಮೋದಿ ಯೋಜನೆ-ಯೋಚನೆ.
ಕಾಂಬೆ ಕೊಲ್ಲಿಯ (ಖಂಭಾತ್ ಕೊಲ್ಲಿ) ಉತ್ತರ ಭಾಗದಲ್ಲಿ ಅಂದರೆ, ಭಾವನಗರದ ಪಿಪವವ್ ಬಂದರಿನಿಂದ 165 ಕಿ.ಮಿ. ದೂರದಲ್ಲಿ 35 ಕಿಲೋ ಮೀಟರ್ ಉದ್ದದ ಈ ಅಣೆಕಟ್ಟು ನಿರ್ಮಾಣವಾಗಲಿದೆ.
ಜಗತ್ತಿನಲ್ಲಿ ಸಮುದ್ರಕ್ಕೆ ಇದುವರೆಗೆ ಅಣೆಕಟ್ಟನ್ನು ನಿರ್ಮಿಸಿದ ಉದಾಹರಣೆಗಳಿಲ್ಲ. ಹಾಗಾಗಿ ಇದೊಂದು ವಿಶ್ವದಾಖಲೆಯೂ ಹೌದು. ಯೋಜನೆಗೆ 'ಕಲ್ಪಾಸರ್ ಡ್ಯಾಂ ಅಲೈನ್‌ಮೆಂಟ್' ಎಂದು ಹೆಸರಿಸಲಾಗಿದೆ.
ಅಣೆಕಟ್ಟು ನಿರ್ಮಾಣದಿಂದಾಗುವ ಲಾಭಗಳು: * ಸಾಗರದ ಅಲೆಗಳಿಂದ (Tidal power) ವಿದ್ಯುತ್ ಉತ್ಪಾದನೆ. * ಅಣೆಕಟ್ಟು ನಿರ್ಮಾಣದಿಂದ ಖಂಭಾತ್ ಕೊಲ್ಲಿಯಲ್ಲಿ ಸಿಹಿ ನೀರಿನ ಸಂಗ್ರಹ ಜಲಾಶಯ. * ಅಣೆಕಟ್ಟಿನ ಮೇಲೆ ರಸ್ತೆ ಮತ್ತು ರೈಲು ಮಾರ್ಗಗಳಿಗಾಗಿ ಮೇಲ್ಸೇತುವೆ ನಿರ್ಮಾಣ. * ಪ್ರಸಕ್ತ ಭಾವನಗರ - ಸೂರತ್ ನಡುವಿನ ಅಂತರ 350 ಕಿಲೋ ಮೀಟರ್. ಅಣೆಕಟ್ಟು ನಿರ್ಮಾಣವಾದರೆ ಅಹಮದಾಬಾದ್ ಮೂಲಕ ತೆರಳುವುದನ್ನು ತಪ್ಪಿಸಿ, ಎರಡು ನಗರಗಳ ಅಂತರದಲ್ಲಿ 200 ಕಿ.ಮೀ.ನಷ್ಟು ಕಡಿಮೆಯಾಗಲಿದೆ. * ಮೀನುಗಾರಿಕೆಗೆ ವಿಪುಲ ಅವಕಾಶ. * ಜಲಾಶಯದಿಂದ ಕುಡಿಯಲು ಮತ್ತು ಕೃಷಿ ಬಳಕೆಗೆ ನೀರು ಪೂರೈಕೆ. * ಪಿಪವವ್ ಬಂದರು ಪ್ರಾಮುಖ್ಯತೆ ಹೆಚ್ಚಲಿದೆ.
ಅಣೆಕಟ್ಟು ನಿರ್ಮಾಣಕ್ಕಾಗಿ 'ಕಲ್ಪಸಾರ್ ಇಲಾಖೆ' ಎಂಬ ಪ್ರತ್ಯೇಕ ಇಲಾಖೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಯೋಜನೆ ಪ್ರಸಕ್ತ ಪ್ರಾಥಮಿಕ ಹಂತದಲ್ಲಿದ್ದು, ಪರಿಸರ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಕೇಂದ್ರದ ಒಪ್ಪಿಗೆ ಸಿಕ್ಕಿದ ನಂತರವಷ್ಟೇ ಚಾಲನೆ ಸಿಗಲಿದೆ.