ಗುಜರಾತಿನ ನರೇಂದ್ರ ಮೋದಿ ಸರಕಾರದ ವಿರುದ್ಧ ಸಿಬಿಐಯನ್ನು ದುರ್ಬಳಕೆ ಮಾಡುತ್ತಾ ಬಂದಿರುವ ಕಾಂಗ್ರೆಸ್, ಇದೀಗ ಆದಾಯ ತೆರಿಗೆ ಇಲಾಖೆಯನ್ನು ಕರ್ನಾಟಕದ ನಿರ್ದಿಷ್ಟ ವ್ಯಕ್ತಿಗಳ ಮೇಲೆ ದಾಳಿಗೆ ಬಳಸಿಕೊಳ್ಳುವ ಮೂಲಕ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಕರ್ನಾಟಕದ ಕೆಲವು ಬಿಜೆಪಿ ಶಾಸಕರನ್ನು ಗುರಿಯಾಗಿಟ್ಟುಕೊಂಡು ಸಮಯೋಚಿತವಾಗಿ ಮತ್ತು ನಿರ್ದಿಷ್ಟವಾಗಿ ನಡೆಸಲಾಗುತ್ತಿರುವ ಆದಾಯ ತೆರಿಗೆ ಇಲಾಖೆ ದಾಳಿಯನ್ನು ಪ್ರಶ್ನಿಸಿರುವ ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು, ಕಾಂಗ್ರೆಸ್ ತನ್ನ ಹಿತಾಸಕ್ತಿಯ ಸಾಧನೆಗಾಗಿ ಅನೀತಿಯುತವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
PTI
ಬಂಡಾಯ ಶಾಸಕರು ಚೆನ್ನೈ, ಕೊಚ್ಚಿ ಮತ್ತು ಗೋವಾಗಳಿಗೆ ತೆರಳಿದ ವೆಚ್ಚ, ಅಲ್ಲಿ ಉಳಿದುಕೊಂಡದ್ದು ಮತ್ತಿತರ ಖರ್ಚುಗಳನ್ನು ನೋಡಿಕೊಂಡದ್ದು ಯಾರು ಎಂಬುದರ ಕುರಿತು ಆದಾಯ ತೆರಿಗೆ ಇಲಾಖೆಯು ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಬಳ್ಳಾರಿಯ ಗಣಿ ರೆಡ್ಡಿ ಸಹೋದರ ಸಚಿವರುಗಳಾದ ಜಿ. ಕರುಣಾಕರ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಸೇರಿದಂತೆ ಬೆಂಗಳೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಏಳು ಬಿಜೆಪಿ ಶಾಸಕರ ಆಸ್ತಿ-ಪಾಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ತನಿಖೆ ನಡೆಸುತ್ತಿದೆ. ಬಿಜೆಪಿ ಕೈಗೊಂಡ ಆಪರೇಷನ್ ಕಮಲಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಕೇಂದ್ರದ ಮೂಲಕ ಈ ದಾಳಿ ನಡೆಸಿದೆ ಎನ್ನುವುದು ಬಿಜೆಪಿ ಆರೋಪ.
ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮೇಲೆಯೂ ವಾಗ್ದಾಳಿ ನಡೆಸಿರುವ ನಾಯ್ಡು, ಅವರ ಉದ್ದೇಶ ಕರ್ನಾಟಕದ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸುವುದು; ಅದಕ್ಕಾಗಿ ಅವರು ಬಿಜೆಪಿ ವಿರುದ್ಧ ಬಂಡಾಯಗಾರರನ್ನು ಎತ್ತಿಕಟ್ಟಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸರಕಾರವನ್ನು ಅಸ್ಥಿರಗೊಳಿಸುವ ಕಾಂಗ್ರೆಸ್‌ನ ಎಲ್ಲಾ ತಂತ್ರಗಳು ವಿಫಲವಾದ ನಂತರ ಆದಾಯ ತೆರಿಗೆ ಇಲಾಖೆಯ ದಾಳಿಗಳನ್ನು ಬಿಜೆಪಿ ಶಾಸಕರ ಮೇಲೆ ನಡೆಸಲಾಗಿದೆ. ಕಾಂಗ್ರೆಸ್ಸೇತರ ಸರಕಾರಗಳನ್ನು ಅಸ್ಥಿರಗೊಳಿಸುವುದು ಮತ್ತು ಎದುರಾಳಿಗಳ ಘನತೆಯನ್ನು ಮಣ್ಣುಪಾಲು ಮಾಡುವುದರ ಮೂಲಕ ಕಾಂಗ್ರೆಸ್ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು 3ಡಿ ನೀತಿಯನ್ನು ಅನುಸರಿಸುತ್ತಿದೆ ಎಂದರು.
ಅದೇ ಹೊತ್ತಿಗೆ ರಾಜಸ್ತಾನದ ಆರೆಸ್ಸೆಸ್ ಪ್ರಕರಣದ ಕುರಿತು ಕೂಡ ನಾಯ್ಡು ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡರು.
ಅಜ್ಮೀರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಂದ್ರೇಶ್ ಕುಮಾರ್ ಅವರನ್ನು ಹೆಸರಿಸುವ ಮೂಲಕ ಆರೆಸ್ಸೆಸ್ ಹೆಸರು ಕೆಡಿಸಲು ರಾಜಸ್ತಾನ ಎಟಿಎಸ್‌ನ್ನು ಅಲ್ಲಿನ ಸರಕಾರ ದುರುಪಯೋಗಪಡಿಸಿಕೊಂಡಿದೆ ಎಂದರು.