ಜಿದ್ದಾಜಿದ್ದಿನ ಹೋರಾಟದ ಬಿಹಾರ ವಿಧಾನಸಭಾ ಚುನಾವಣೆಯ 3ನೇ ಹಂತದ 48 ಕ್ಷೇತ್ರಗಳ ಮತದಾನ ಗುರುವಾರ ಬೆಳಿಗ್ಗೆ ಆರಂಭಗೊಂಡಿದ್ದು, ಮಾಜಿ ಮುಖ್ಯಮಂತ್ರಿ, ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ ಹಾಗೂ ಆಕೆಯ ಸಹೋದರ ಸಾಧು ಯಾದವ್ ಸೇರಿದಂತೆ ಹಲವು ಘಟಾನುಘಟಿಗಳ ಹಣೆಬರಹವನ್ನು ಮತದಾರ ಇಂದು ನಿರ್ಧರಿಸಲಿದ್ದಾನೆ.
ರಾಘೋಪುರ್ ಶಾಸಕಿಯಾಗಿದ್ದ ರಾಬ್ರಿ ದೇವಿ ಈ ಬಾರಿ ಸೋನೆಪುರ್ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟಪರೀಕ್ಷೆಗೆಗಾಗಿ ಕಣಕ್ಕೆ ಇಳಿದಿದ್ದಾರೆ. ಆದರೆ ಇದರಲ್ಲಿ ತುಂಬಾ ಕುತೂಹಲಕಾರಿಯಾದ ವಿಷಯ ಅಂದ್ರೆ, ಆಕೆಯ ಸಹೋದರ ಸಾಧು ಯಾದವ್ ಗೋಪಾಲ್‌ಗಂಜ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ.
ಒಟ್ಟಿನಲ್ಲಿ ಬಿಹಾರದ ಮತದಾರ ಇಂದು ಆರಂಭಗೊಂಡಿರು ಮೂರನೇ ಹಂತದ ಮತದಾನದಲ್ಲಿ ಹಲವು ಘಟಾನುಘಟಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಅಲ್ಲದೇ ಈ ಚುನಾವಣೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಅಗ್ನಿಪರೀಕ್ಷೆಯಾಗಿದೆ. ಮೂರನೇ ಹಂತದ ಚುನಾವಣೆಯಲ್ಲಿ 48 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಪ್ರಾಬಲ್ಯವಿದೆ. ಈ ಪ್ರಾಬಲ್ಯ ಉಳಿಸಿಕೊಳ್ಳಲು ನಿತೀಶ್ ಪಣ ತೊಟ್ಟಿದ್ದಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷದಿಂದ 38 ಅಭ್ಯರ್ಥಿಗಳು, ಆರ್‌ಜೆಡಿ-35, ಜೆಡಿ(ಯು)-24, ಬಿಜೆಪಿ-24, ಎಲ್‌ಜೆಪಿ-13, ಸಿಪಿಐ-10 ಮತ್ತು ಸಿಎಂನ ಐದು ಸೇರಿದಂತೆ ಒಟ್ಟು 785 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಆರು ಹಂತಗಳಲ್ಲಿ ನಡೆಯುತ್ತಿರುವ ಬಿಹಾರ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಸುಮಾರು 1.3 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮೂರನೇ ಹಂತದ ಚುನಾವಣೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಸಚಿವ ಬ್ರಿಸಾನ್ ಪಾಟೇಲ್, ರೇಣು ದೇವಿ, ರಾಮ್ ಪರ್ವೆಶ್ ರಾಯ್, ಗೌತಮ್ ಸಿಂಗ್, ವ್ಯಾಸ್‌ಡೆವೋ ಪ್ರಸಾದ್, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಸೆಗ್ರಿವಾಲ್ ಮತ್ತು ಜೆಯುಡಿ ಶಾಸಕ ಮುನ್ನಾ ಶುಕ್ಲಾ ಪತ್ನಿ ಅನ್ನು ಶುಕ್ಲಾ ಕಣದಲ್ಲಿರುವ ಹುರಿಯಾಳುಗಳಾಗಿದ್ದಾರೆ.
ನಕ್ಸಲೀಯರ ಬೆದರಿಕೆಯ ಹಿನ್ನೆಲೆಯಲ್ಲಿ ಮತದಾನ ನಡೆಯುತ್ತಿರುವ ಎಲ್ಲಾ ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ ವೈಮಾನಿಕ ಗಸ್ತು ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.