ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆನೆ ಮರಿಯನ್ನು ಹೊಡೆದು, ತಿವಿದು ಕೊಂದ ಕ್ರೂರಿಗಳು (Baby elephant | Jagiroad | Morigaon | elephant)
Bookmark and Share Feedback Print
 
ಗ್ರಾಮಸ್ಥರೆಲ್ಲ ಸೇರಿಕೊಂಡು ಮರಿಯಾನೆಯೊಂದನ್ನು ಹೊಡೆದೇ ಕೊಂದು ಹಾಕಿರುವ ಹೃದಯ ವಿದ್ರಾವಕ ಘಟನೆಯಿದು. ಕ್ರೂರ ಪ್ರಾಣಿಗಳೆದುರು ಹುಲು ಮಾನವ ಎಂದೇ ಕರೆಸಿಕೊಂಡರೂ, ಅವುಗಳು ಅಸಹಾಯಕವಾದಾಗ ಹೇಗೆ ತನ್ನ ದಾಷ್ಟ್ಯವನ್ನು ಪ್ರದರ್ಶಿಸುತ್ತಾನೆ ಮತ್ತು ಮನುಷ್ಯ ಅದೆಷ್ಟು ಕ್ರೂರಿ ಎಂಬುದನ್ನು ತೋರಿಸಲು ಇದಕ್ಕಿಂತ ದೊಡ್ಡ ಅಮಾನವೀಯತೆಯ ಉದಾಹರಣೆ ಬೇಕಿಲ್ಲ.
PR

ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಆನೆಯನ್ನು ಕೇಂದ್ರ ಸರಕಾರವು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಹೆಸರಿಸಿದ ಬೆನ್ನಿಗೆ ಈ ಘಟನೆ ನಡೆದಿದೆ. ಇದು ನಡೆದಿರುವುದು ಆನೆಗಳು ಅತಿ ಹೆಚ್ಚು ಕೊಲ್ಲಲ್ಪಡುತ್ತಿರುವ ಭಾರತದ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ.

ಇಲ್ಲಿನ ಮೊರಿಗಾನ್ ಜಿಲ್ಲೆಯ ಜಾಗಿರೋಡ್ ಎಂಬಲ್ಲಿನ ಗದ್ದೆಯೊಂದರಲ್ಲಿ ಹಗಲು ಹೊತ್ತಿನಲ್ಲಿ ಸುಮಾರು ಮೂರೂವರೆ ವರ್ಷದ ಮರಿ ಆನೆಯೊಂದು ದಾರಿ ತಪ್ಪಿ ಬಂದಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಒಟ್ಟು ಸೇರಿ ದೊಣ್ಣೆ ಮತ್ತು ಕಬ್ಬಿಣದ ಈಟಿಗಳಿಂದ ಹೊಡೆದು, ಬಡಿದು, ತಿವಿದು ಕೊಂದು ಹಾಕಿದ್ದಾರೆ.

ಅಚ್ಚರಿಯೆಂದರೆ ಈ ರೀತಿಯಾಗಿ ಗಾಯಗೊಂಡು ಪ್ರಾಣಭಿಕ್ಷೆಗಾಗಿ ಆಚೀಚೆ ಓಡುತ್ತಿದ್ದ ಪುಟ್ಟ ಆನೆಯನ್ನು ರಕ್ಷಿಸಲು ಪೊಲೀಸರು ಕೂಡ ಮುಂದಾಗದೆ ಇರುವುದು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಪೊಲೀಸರು ಮೂಕಪ್ರೇಕ್ಷರಂತೆ ಆನೆಯನ್ನು ಕೊಂದು ಹಾಕುವುದನ್ನು ನೋಡಿದ್ದರು.

ನೂರಾರು ಮಂದಿ ಆಳಿಗೊಬ್ಬರಂತೆ ನಾಮುಂದು ತಾಮುಂದು ಎಂದು ಹೊಡೆದು-ತಿವಿಯುತ್ತಿದ್ದಾಗ ನೋವು ತಾಳಲಾರದೆ ಘೀಳಿಡುತ್ತಾ ಅತ್ತಿಂದಿತ್ತ ಓಡುತ್ತಿದ್ದ ಆನೆ ಮರಿಯ ರೋದನವನ್ನು ಮೊಬೈಲುಗಳಲ್ಲಿಯೂ ಸ್ಥಳೀಯರು ಚಿತ್ರೀಕರಣ ನಡೆಸಿದ್ದಾರೆ. ಯಾರಿಗೂ ಯಾವುದೇ ತೊಂದರೆ ಮಾಡದಿದ್ದರೂ, ಅದನ್ನು ಕೊಲ್ಲುವ ಬದಲು ರಕ್ಷಿಸುವ ಮನಸ್ಸು ಮಾತ್ರ ಯಾರೊಬ್ಬರೂ ಮಾಡಿರದೇ ಇರುವುದು ಮಾತ್ರ ದುರದೃಷ್ಟ.

ಗ್ರಾಮಸ್ಥರು ಎಷ್ಟೊಂದು ಕ್ರೂರಿಗಳಾಗಿದ್ದರೆಂದರೆ ಮರಿ ಆನೆಯನ್ನು ಓಡಿಸಿಕೊಂಡು ಹೊಡೆದ ನಂತರ ಅದರ ಮೇಲೇರಿ ತಿವಿಯುತ್ತಿದ್ದರು. ಕೆಲವರು ಬಾಲವನ್ನು ಹಿಡಿದು ಎಳೆಯುತ್ತಿದ್ದರು. ಅದು ಬಿದ್ದ ನಂತರ ತಲೆಯ ಮೇಲೆ ಹತ್ತಿ ಕಬ್ಬಿಣದ ರಾಡುಗಳಿಂದ ಚುಚ್ಚುತ್ತಿದ್ದರು. ಇದು ಆನೆ ಮರಿ ಕೊನೆಯುಸಿರೆಳೆಯುವವರೆಗೂ ಮುಂದುವರಿದಿತ್ತು.

ಕೆಲವು ವರದಿಗಳ ಪ್ರಕಾರ ಕೊನೆಯ ಹಂತದಲ್ಲಿ ಮಧ್ಯ ಪ್ರವೇಶಿಸಿದ್ದ ಅರಣ್ಯಾಧಿಕಾರಿಗಳು ಮರಿಯಾನೆಯನ್ನು ರಕ್ಷಿಸಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆ ನೀಡಿದರೂ, ಅದನ್ನು ಬದುಕಿಸುವುದು ಸಾಧ್ಯವಾಗಿಲ್ಲ. ಕೊನೆಗೆ ಅದು ಸೋಮವಾರ ಸಾವನ್ನಪ್ಪಿದೆ.

ಇತ್ತೀಚಿನ ದಿನಗಳಲ್ಲಿ ಅಸ್ಸಾಂನಲ್ಲಿ ಆನೆಗಳು ಬರ್ಬರವಾಗಿ ಹತ್ಯೆಗೊಳಗಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ತಮ್ಮ ಗದ್ದೆ-ತೋಟಗಳನ್ನು ಹಾನಿ ಮಾಡುತ್ತಿವೆ ಎಂಬ ಕಾರಣಗಳನ್ನಿಡುವ ಮಂದಿ ವಿದ್ಯುತ್ ಶಾಕ್ ನೀಡಿ, ವಿಷವುಣ್ಣಿಸಿ, ಗುಂಡಿಕ್ಕಿ ಕೊಂದು ಹಾಕುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಾಲ್ಕು ಆನೆಗಳನ್ನು ವಿಷಪ್ರಾಶನ ಮಾಡಿ ಕಜಿರಂಗಾ ಎಂಬಲ್ಲಿ ಕೊಂದು ಹಾಕಲಾಗಿತ್ತು.

ಪ್ರಾಣಿ ಪ್ರಿಯರು ಮತ್ತು ವನ್ಯಜೀವಿ ತಜ್ಞರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಘಟನೆಗೆ ಕಾರಣರಾದ ಎಲ್ಲಾ ಅಧಿಕಾರಿಗಳನ್ನು ಅಮಾನತಿನಲ್ಲಿಡಬೇಕು ಮತ್ತು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ವನ್ಯಜೀವಿಗಳ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಈ ಕುಕೃತ್ಯದಲ್ಲಿ ಪಾಲ್ಗೊಂಡವರನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ