ಧರ್ಮಗಳೆಂದರೆ ಮಾರು ದೂರ ಓಡುವ ಪಕ್ಷವೆಂದೇ ಖ್ಯಾತಿಯಾಗಿರುವುದು ಕಮ್ಯೂನಿಸ್ಟ್. ಅದರಲ್ಲೂ ಹಿಂದೂ ಧರ್ಮವೆಂದರೆ ವಿಶೇಷವಾಗಿ ಈ ಪಕ್ಷಗಳಿಗೆ ಅಲರ್ಜಿ. ಆದರೆ ಕೇರಳದ ಸಿಪಿಎಂ ಮುಖಂಡರೊಬ್ಬರು, ದೇವರೆಂದರೆ ಬೆನ್ನು ಹಾಕುತ್ತಿದ್ದವರು ಈಗ ಶಬರಿಮಲೆಯಲ್ಲಿ ಅರ್ಚಕರಾಗಿ ನೇಮಕಗೊಂಡಿದ್ದಾರೆ ಎಂದರೆ?
ಹೌದು, ಧನಂಜಯನ್ ನಂಬೂದರಿ ಎಂಬವರೇ ಇದೀಗ ಶಬರಿಮಲೆಯ ಮಲ್ಲಿಕಾಪುರಂ ದೇವಳದಲ್ಲಿ ಅರ್ಚಕರಾಗಿ ನೇಮಕಗೊಂಡವರು. ಪ್ರಸಕ್ತ ಇವರು ದೇವಸ್ವಂ ಮಂಡಳಿಯ ಆಡಳಿತದಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
PR
ಮನೆಯಲ್ಲಿ ಗಣಹೋಮ ನಡೆಸಿದ್ದಕ್ಕೆಲ್ಲ ತನ್ನ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಕಮ್ಯೂನಿಸ್ಟ್ ಪಕ್ಷವು ಅಮಾನತುಗೊಳಿಸಿ, ಕಠಿಣ ಕ್ರಮಗಳನ್ನು ಕೈಗೊಂಡಿದ್ದನ್ನು ಪ್ರತಿಯೊಬ್ಬರೂ ಕೇಳಿರುತ್ತಾರೆ. ಇದೇ ಕಾರಣದಿಂದ ಪಕ್ಕದ ದೇವಸ್ಥಾನಗಳಿಗೆ ಹೋಗಬೇಕಾದ ಕಾಮ್ರೇಡುಗಳು ತಲೆ ಮರೆಸಿಕೊಂಡು ಹೋಗಿದ್ದೂ ಉಂಟು. ಈ ನಡುವೆ ವರದಿಯಾಗಿರುವ ವಿಶೇಷ ಪ್ರಕರಣವಿದು.
1993ರಿಂದಲೇ ಅಳಪ್ಪುಳ ಜಿಲ್ಲಾ ಸಿಪಿಎಂ ಸದಸ್ಯನಾಗಿದ್ದ ನಂಬೂದರಿ ಕಳೆದ ಎರಡು ವರ್ಷಗಳ ಹಿಂದೆಯೇ ತನ್ನನ್ನು ಪಕ್ಷದ ಸದಸ್ಯದಿಂದ ತೆರವುಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ತಾನು ಅರ್ಚಕನಾಗಿ ನೇಮಕಗೊಳ್ಳಬೇಕಿರುವುದರಿಂದ ಪಕ್ಷದಿಂದ ಹೊರಗುಳಿಯುವುದು ಅನಿವಾರ್ಯ ಎಂದು ಅವರು ಭಾವಿಸಿದ್ದರು.
ಆದರೆ ಪಕ್ಷ ತನ್ನ ನೀತಿಗಳಲ್ಲಿ ಬದಲಾವಣೆಗಳನ್ನು ನಿಧಾನವಾಗಿ ಒಪ್ಪಿಕೊಳ್ಳುತ್ತಿದ್ದ ಕಾರಣ ನಂಬೂದರಿಯವರನ್ನು ಪಕ್ಷದಿಂದ ಬಿಟ್ಟಿರಲಿಲ್ಲ. ಪಕ್ಷದ ನಾಯಕನಾಗಿದ್ದ ಮಾತ್ರಕ್ಕೆ, ಅವರು ದೇವಸ್ಥಾನದಲ್ಲಿ ಅರ್ಚಕರಾಗಿರಬಾರದು ಎಂದೇನಿಲ್ಲ. ಅದರ ಜತೆಗೆ ಪಕ್ಷದ ಕೆಲಸವನ್ನೂ ಮಾಡಬಹುದು ಎನ್ನುವುದು ಸಿಪಿಎಂ ಮುಖಂಡರ ಅಭಿಪ್ರಾಯ.
ತನ್ನ ಧಾರ್ಮಿಕ ನಂಬಿಕೆಗಳಲ್ಲಿ ಪಕ್ಷವು ಯಾವತ್ತೂ ಮಧ್ಯ ಪ್ರವೇಶಿಸಿಲ್ಲ. ನಾನು ಅರ್ಚಕನೆಂದು ತಿಳಿದ ಮೇಲೂ ನನಗೆ ಪಕ್ಷವು ಸಹಕಾರ ನೀಡುತ್ತಾ ಬಂದಿದೆ. ಸಿಪಿಎಂ ಬ್ರಾಂಚ್ ಕಾರ್ಯದರ್ಶಿಯಾಗಿ ನಾನು ಮುಂದುವರಿದಿದ್ದೇನೆ ಎಂದು ನಂಬೂದರಿ ತಿಳಿಸಿದ್ದಾರೆ.
ನಮ್ಮ ಪಕ್ಷದ ಎಲ್ಲಾ ಸದಸ್ಯರು ನಾಸ್ತಿಕರಾಗಿರಬೇಕು ಎಂದು ನಾವು ನಿರೀಕ್ಷಿಸುತ್ತಿಲ್ಲ. ಅರ್ಚಕರಾಗಿರುವುದನ್ನು ನಾವು ಅದು ಅವರ ಉದ್ಯೋಗ ಪರಿಗಣಿಸುತ್ತೇವೆ. ಹಾಗಾಗಿ ಅವರನ್ನು ಜಿಲ್ಲಾ ಕಾರ್ಯದರ್ಶಿ ಜವಾಬ್ದಾರಿಯಿಂದ ತೆರವುಗೊಳಿಸುವುದಿಲ್ಲ ಎಂದು ಸಿಪಿಎಂ ಅಳಪ್ಪುಳ ಜಿಲ್ಲಾ ಕಾರ್ಯದರ್ಶಿ ಸಿ.ವಿ. ಚಂದ್ರಬಾಬು ಹೇಳಿದ್ದಾರೆ.
ಈ ನಡುವೆ ಇದು ಶಬರಿಮಲೆಯ ಪಾವಿತ್ರ್ಯತೆಯನ್ನು ಕೆಡಿಸಲು ಕಮ್ಯೂನಿಸ್ಟ್ ಹೂಡಿರುವ ತಂತ್ರ ಎಂದು ಕೆಲವು ಹಿಂದೂ ಸಂಘಟನೆಗಳು ಆರೋಪಿಸಿವೆ.
ಈ ಹಿಂದೆ ಶಬರಿಮಲೆಯ ಜನಪ್ರಿಯತೆಯನ್ನು ಹೇಗಾದರೂ ಕುಗ್ಗಿಸಬೇಕು ಎಂದು ಪಣತೊಟ್ಟಿದ್ದ ಆರೋಪ ಹೊತ್ತಿದ್ದ ಸಿಪಿಎಂ, ಹಿಂದೂ ವಿರೋಧಿ ಸುಧಾಕರನ್ ಅವರನ್ನು ದೇವಸ್ವಂ ಸಚಿವರನ್ನಾಗಿ ನೇಮಕಗೊಳಿಸಿತ್ತು. ಈಗ ಸಿಪಿಎಂ ನಾಯಕರೊಬ್ಬರನ್ನು ಮಲ್ಲಿಕಾಪುರಂ ದೇವಸ್ಥಾನದ ಪ್ರಧಾನ ಅರ್ಚಕರನ್ನಾಗಿ ನೇಮಕ ಮಾಡುವ ಮೂಲಕ ಮತ್ತೊಂದು ತಂತ್ರ ಹೂಡಿದೆ ಎಂದು ಆರೋಪಿಸಲಾಗಿದೆ.