ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇವರವ್ನೆ ನೀ ನೈಂಟಿ ಹೊಡಿ ಅಂತಿದಾರೆ ಹುಡ್ಗ-ಹುಡ್ಗೀರು! (Students | Alcohol consumption | Assocham | Bangalore)
Bookmark and Share Feedback Print
 
ನವದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು ಮುಂತಾದ ಮೆಟ್ರೋ ನಗರಗಳಲ್ಲಿ ಶಾಲಾ ಹುಡುಗರು-ಹುಡುಗಿಯರು ಬಾಟಲಿ ಹಿಡಿಯುತ್ತಿರುವುದು ದಿನದಿಂದ ದಿನಕ್ಕೆ ಆತಂಕ ಹುಟ್ಟಿಸುವ ರೀತಿಯಲ್ಲಿ ಹೆಚ್ಚುತ್ತಿದೆ. ಪ್ಲಸ್ ಟು ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇ.45ರಷ್ಟು ಮಂದಿ ತಿಂಗಳಿಗೆ ಐದಾರು ಬಾರಿ ಕುಡಿಯುತ್ತಾರಂತೆ.

ಇಂತಹದ್ದೊಂದು ಸಮೀಕ್ಷೆಯನ್ನು ನಡೆಸಿರುವುದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಅಸೋಚಾಮ್). ಹದಿಹರೆಯದ ವಿದ್ಯಾರ್ಥಿಗಳು ಕುಡಿತದ ಚಟಕ್ಕೆ ಯಾವ ಹೊತ್ತಿನಲ್ಲಿ, ಯಾವ ಕಾರಣಗಳಿಗಾಗಿ ಬೀಳುತ್ತಿದ್ದಾರೆ ಎಂಬುದನ್ನು ವಿಸ್ತೃತವಾಗಿ ಅಧ್ಯಯನ ನಡೆಸಿ ವರದಿಯನ್ನು ಪ್ರಕಟಿಸಲಾಗಿದೆ.

ತಾವು ಅಪ್‌ಸೆಟ್ ಆದಾಗ ಕುಡಿಯುತ್ತೇವೆ ಎಂದು ಶೇ.32ರಷ್ಟು ಹುಡುಗ-ಹುಡುಗಿಯರು ಹೇಳಿಕೊಂಡಿದ್ದಾರೆ. ಹದಿಹರೆಯದವರು ಅಪ್‌ಸೆಟ್ ಆಗಲು ಕಾರಣವೇನು ಎಂಬುದನ್ನು ಹುಡುಕಿದಾಗ ಅಲ್ಲಿ ಪ್ರಮುಖವಾಗಿ ಕಾಣುವುದು ಹೆತ್ತವರ ಪ್ರೀತಿಯ ಕೊರತೆ ಮತ್ತು ಹೆಚ್ಚಿದ ಹೊರಗಿನ ಪ್ರೀತಿಯ ಒರತೆ. ಎರಡೂ ಸಮರ್ಪಕವಾಗಿ ಸಿಗದ ಹೊತ್ತಿನಲ್ಲಿ ಬಾಟಲಿಯನ್ನು ನೆಚ್ಚಿಕೊಳ್ಳುವ, ಪರಿಹಾರ ಕಂಡುಕೊಳ್ಳಲು ಯತ್ನಿಸುವುದು ಭೀತಿ ಹುಟ್ಟಿಸುವ ರೀತಿಯಲ್ಲಿ ಏರಿಕೆಯಾಗುತ್ತಿದೆ.

ಈ ವಿದ್ಯಾರ್ಥಿಗಳು (15ರಿಂದ 19ರ ನಡುವಿನವರು) ಕುಡಿತಕ್ಕೆ ಖರ್ಚು ಮಾಡುವ ಪರಿ ಹೇಗಿದೆ ಎಂದರೆ, ಅವರು ಸಾಫ್ಟ್‌ಡ್ರಿಂಕ್ಸ್, ಟೀ, ಹಾಲು, ಜ್ಯೂಸ್, ಕಾಫಿ, ಸಿನಿಮಾ ಟಿಕೆಟ್ ಅಥವಾ ಪುಸ್ತಕಗಳಿಗೆ ವರ್ಷದಲ್ಲಿ ಒಟ್ಟು ಖರ್ಚು ಮಾಡುವ ಹಣಕ್ಕಿಂತ ಹೆಚ್ಚು ಮೊತ್ತವನ್ನು ಅಂದರೆ 3,500 ರೂಪಾಯಿಗಳಿಂದ 4,500 ರೂಪಾಯಿಗಳನ್ನು ಕುಡಿತಕ್ಕೆ ಖರ್ಚು ಮಾಡುತ್ತಾರೆ.

ಈ ಬಗ್ಗೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಕೇಂದ್ರದ ತಜ್ಞ ಡಾ. ಎಸ್.ವಿ. ಶ್ರೀಕಂಠೇಶ್ವರ್ ಮಾತಲ್ಲೇ ಕೇಳುವುದಾದರೆ, 'ನಾವು ಪ್ರತಿ ತಿಂಗಳು ಸರಾಸರಿ ಆರರಿಂದ ಎಂಟು ಇಂತಹ ಪ್ರಕರಣಗಳನ್ನು ಕಾಣುತ್ತಿದ್ದೇವೆ. ಅವರಲ್ಲಿ ಇಬ್ಬರು ಅಥವಾ ಮೂವರು ಹುಡುಗಿಯರಾಗಿರುತ್ತಾರೆ. ಈ ಬಗ್ಗೆ ಹೆತ್ತವರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ವಿದ್ಯಾರ್ಥಿಗಳ ಕಳಪೆ ನಿರ್ವಹಣೆ ಬಗ್ಗೆ ಪ್ರಾಧ್ಯಾಪಕರುಗಳು ಗಮನ ಸೆಳೆದ ನಂತರವಷ್ಟೇ ಅವರ ವರ್ತನೆ ಬಗ್ಗೆ ನಮ್ಮಲ್ಲಿ ಪ್ರಸ್ತಾಪಿಸುತ್ತಾರೆ' ಎನ್ನುತ್ತಾರೆ.

ಈ ಸಮೀಕ್ಷೆಗಾಗಿ ಮುಂಬೈ, ಗೋವಾ, ಕೊಚ್ಚಿ, ಚೆನ್ನೈ, ಹೈದರಾಬಾದ್, ಇಂದೋರ್, ಪಾಟ್ನಾ, ಪುಣೆ, ದೆಹಲಿ, ಚಂಡೀಗಢ ಮತ್ತು ಡೆಹ್ರಾಡೂನ್‌ಗಳ 2,000ಕ್ಕೂ ಹೆಚ್ಚು ಟೀನೇಜರುಗಳನ್ನು ಬಳಸಿಕೊಳ್ಳಲಾಗಿದೆ. ಅದರ ಪ್ರಕಾರ ಅತಿ ಹೆಚ್ಚು ವಿದ್ಯಾರ್ಥಿಗಳು ಕುಡಿಯುತ್ತಿರುವುದು ದೆಹಲಿ ಮತ್ತು ಮುಂಬೈಗಳಲ್ಲಿ ಹಾಗೂ ನಂತರದ ಸ್ಥಾನಗಳಲ್ಲಿ ಚಂಡೀಗಢ ಮತ್ತು ಹೈದರಾಬಾದ್‌ಗಳಿವೆ.

ಈ ಸಮೀಕ್ಷೆಯಲ್ಲಿ ಕಂಡುಕೊಂಡ ಕೆಲವು ಪ್ರಮುಖ ಅಂಶಗಳಿವು:
* 15ರಿಂದ 19ರ ನಡುವಿನ ಹದಿಹರೆಯದವರು ಹೆಚ್ಚು ಕುಡಿತಕ್ಕೆ ಸೆಳೆಯಲ್ಪಡುತ್ತಿದ್ದಾರೆ.
* ಹದಿಹರೆಯದವರ ಈ ಚಟಕ್ಕೆ ಪ್ರಮುಖ ಕಾರಣ ಹೆತ್ತವರ ಅನುಪಸ್ಥಿತಿ.
* ಶ್ರೀಮಂತಿಕೆ ಮತ್ತು ಹದಿಹರೆಯದವರಲ್ಲಿನ ಒತ್ತಡವೂ ಕುಡಿತಕ್ಕೆ ಕಾರಣ.
* ಆಮದು ಮಾಡಿಕೊಂಡ ಬ್ರಾಂಡ್‌ಗಳ ಬಗ್ಗೆ ಕೆಟ್ಟ ಕುತೂಹಲ.
* ಪಿಯುಸಿ ವಿದ್ಯಾರ್ಥಿಗಳಲ್ಲಿ ಶೇ.45ರಷ್ಟು ಮಂದಿ ನಿರಂತರ ಕುಡಿಯುತ್ತಾರೆ.
* ಕಳೆದ 10 ವರ್ಷಗಳಲ್ಲಿ ಹದಿಹರೆಯದವರ ಕುಡಿತ ಪ್ರಮಾಣ ಶೇ.100ರಷ್ಟು ಹೆಚ್ಚಿದೆ.
* ಶೇ.32ರಷ್ಟು ಹದಿಹರೆಯದವರು ಕ್ಷೋಭೆಗೊಂಡಾಗ ಕುಡಿಯುತ್ತಾರೆ.
* ಶೇ.18ರಷ್ಟು ಮಂದಿ ಗುಂಪನ್ನು ಬಿಟ್ಟು ಏಕಾಂಗಿಯಾಗಿ ಕುಡಿಯುತ್ತಾರೆ.
* ಶೇ.15ರಷ್ಟು ಮಂದಿ ಬೋರ್ ಆದಾಗ ಬಾಟಲಿ ಕೈಗೆತ್ತಿಕೊಳ್ಳುತ್ತಾರೆ.
* ಶೇ.46ರಷ್ಟು ಹದಿಹರೆಯದವರು ಅಮಲೇರಿಸಿಕೊಳ್ಳಲೆಂದು ಕುಡಿಯುತ್ತಾರೆ.
* ಇತರ ದೈನಂದಿನ ವಿಚಾರಗಳಿಗೆ ಖರ್ಚು ಮಾಡುವ ಮೊತ್ತಕ್ಕಿಂತ ಹೆಚ್ಚನ್ನು ಕುಡಿತಕ್ಕೆ ವ್ಯಯಿಸುತ್ತಾರೆ.
* ಹೆಚ್ಚಿನವರು ಆಲ್ಕೋಹಾಲ್‌ನತ್ತ ವಾಲುವುದು ಬೀಳ್ಕೊಡುಗೆ, ಹೊಸ ವರ್ಷ, ಕ್ರಿಸ್ಮಸ್, ವೆಲೆಂಟೈನ್ಸ್ ಡೇ, ಬರ್ತ್‌ಡೇ ಮತ್ತಿತರ ಸಂದರ್ಭಗಳಲ್ಲಿ.
* ಶೇ.35ರಷ್ಟು ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಹತ್ತುವ ಮೊದಲೇ ಮದ್ಯ ಸೇವಿಸಿರುತ್ತಾರೆ.
* ಕುಡಿತದಲ್ಲಿ ಹುಡುಗಿಯರು ಕೂಡ ಹಿಂದೆ ಬಿದ್ದಿಲ್ಲ.
* 15ರಿಂದ 17ರ ನಡುವೆ ಶೇ.40ರಷ್ಟು ಹುಡುಗಿಯರು ಬಾಟಲಿ ಎತ್ತಿಕೊಂಡಿರುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ