ಗಡಿ ಭದ್ರತಾ ಪಡೆಯಲ್ಲಿ ಜವಾನನಾಗಿದ್ದ ಯುವಕನನ್ನು ವೈದ್ಯಕೀಯ ಕಾರಣಗಳನ್ನು ಮುಂದೊಡ್ಡಿ ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಇದು ನಡೆದಿರುವುದು ಹತ್ತು ವರ್ಷಗಳ ಹಿಂದೆ. ಆ ಬಳಿಕ ನ್ಯಾಯಕ್ಕಾಗಿ ನಡೆಸಿದ ಎಲ್ಲಾ ಹೋರಾಟಗಳು ವಿಫಲವಾದ ನಂತರ ಆತ್ಮಹತ್ಯೆಯ ಮೊದಲು ಮತ್ತೊಂದು ಯತ್ನ ಎಂಬಂತೆ ಮಕ್ಕಳೊಂದಿಗೆ ಬೆತ್ತಲಾಗಿ ಬೀದಿಗೆ ಬಂದಿದ್ದಾನೆ.
ಆ ಜವಾನ ಕಂಗಾಲಾಗಿದ್ದಾನೆ. ತನ್ನ ಮಕ್ಕಳನ್ನು ಸಾಕುವ ದಾರಿ ಕಾಣದೆ ಬೆತ್ತಲಾಗಿಯೇ ಪ್ರತಿಭಟಿಸಬೇಕು ಎಂದು ನಿರ್ಧರಿಸಿದ್ದ. ಹೌದು, ಆತನಲ್ಲಿ ಮತ್ತೆ ಯೋಧನಾಗುವ ಯಾವುದೇ ನಿರೀಕ್ಷೆಗಳು ಉಳಿದಿಲ್ಲ. ಆದರೂ ನ್ಯಾಯದ ನಿರೀಕ್ಷೆಯಲ್ಲಿದ್ದಾನೆ. ಸುಖಾ ಸುಮ್ಮನೆ ನನ್ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾನೆ.
PR
ಆತನ ಹೆಸರು ಅಶೋಕ್ ಕುಮಾರ್ ಸಿರೋಹಿ. ಸಾಕಷ್ಟು ಮನವಿಗಳ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದು ವಿಫಲವಾದ ನಂತರ ಮೊನ್ನೆ ಬುಧವಾರ ನವದೆಹಲಿಯ ರಾಷ್ಟ್ರಪತಿ ಭವನದ ಎದುರಿಗಿನ ರಾಜಬೀದಿಯಲ್ಲಿ ಮಕ್ಕಳ ಸಹಿತ ತಾನೂ ಬೆತ್ತಲಾಗಿದ್ದಾನೆ.
ಕೆಲಸವನ್ನು ಕಳೆದುಕೊಂಡಿರುವ ನಾನು ಈ ಪುಟ್ಟ ಮಕ್ಕಳನ್ನು ಹೇಗೆ ಸಾಕಲಿ ಎಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ತನ್ನ ಅಳಲನ್ನು ತೋಡಿಕೊಳ್ಳಬೇಕೆಂದು ಉದ್ದೇಶವಿಟ್ಟುಕೊಂಡು ಹೊರಟಿದ್ದ ಅಶೋಕ್‌ನನ್ನು ದಾರಿ ಮಧ್ಯದಲ್ಲಿಯೇ ಪೊಲೀಸರು ಬಂಧಿಸಿದ್ದಾರೆ. ಆತನ ನಿಜವಾದ ಉದ್ದೇಶವೇನಿತ್ತು ಎಂಬ ಕುರಿತು ತನಿಖೆ ನಡೆಸುತ್ತಿದ್ದಾರೆ.
ಆರಂಭದಲ್ಲಿ ಪ್ರಕರಣದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಬಿಎಸ್ಎಫ್ ನಿರಾಕರಿಸಿತ್ತು. ಆದರೆ ಬೆತ್ತಲೆ ಮೆರವಣಿಗೆ ಮಾಡುತ್ತಿದ್ದಂತೆ ಅಧಿಕಾರಿಯೊಬ್ಬರು ಭೇಟಿ ಮಾಡಿದ್ದು, ಈ ವಿಚಾರದಲ್ಲಿ ಅನುಕಂಪವನ್ನು ಆಧಾರವಾಗಿ ಪಡೆದುಕೊಂಡು ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
ಪೊಲೀಸರಿಂದ ಬಿಡುಗಡೆಯಾದ ನಂತರ ಗುರುವಾರ ಅಶೋಕ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಸುದ್ದಿವಾಹಿನಿಯೊಂದರಲ್ಲಿ ತನ್ನ ವ್ಯಥೆಯ ಕಥೆಯನ್ನು ವಿವರಿಸಿದ್ದಾನೆ. ತಾನು ಕೆಲಸಕ್ಕೆ ಮರು ನೇಮಕಗೊಳ್ಳಲು, ವಜಾ ಆದೇಶ ರದ್ದಾಗಲು ಕೇಂದ್ರ ಗೃಹ ಸಚಿವಾಲಯದ ವ್ಯಕ್ತಿಯೊಬ್ಬರಿಗೆ 1.60 ಲಕ್ಷ ರೂಪಾಯಿ ಲಂಚ ನೀಡಿದ್ದೆ, ಅವರು ಭರವಸೆ ನೀಡಿದ್ದರು. ಆದರೆ ಅಲ್ಲೂ ನನಗೆ ವಂಚನೆ ಎಸಗಲಾಯಿತು ಎಂದು ಹೇಳಿದ್ದಾನೆ.
ಆರೋಗ್ಯದ ಸಮಸ್ಯೆಯೇನು? ಗಡಿಯಲ್ಲಿ ಬಿಎಸ್ಎಫ್ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಅಶೋಕ್ ಡಯಾಬಿಟೀಸ್ ಮತ್ತು ಹೃದಯ ರೋಗಿ ಎಂಬುದು ಪರೀಕ್ಷೆಯಿಂದ ತಿಳಿದು ಬಂದಿತ್ತು. ಈ ಕುರಿತು ಬಿಎಸ್ಎಫ್ ಅಧಿಕಾರಿಗಳು ಅಶೋಕ್‌ನನ್ನು ಬಹಿರಂಗವಾಗಿ ಲೇವಡಿ ಮಾಡಿದ್ದರು. ಆದರೂ ಕುಟುಂಬದ ಲಾಲನೆ-ಪಾಲನೆಯ ಅನಿವಾರ್ಯತೆಯಿಂದಾಗಿ ಅಶೋಕ್ ಉದ್ಯೋಗ ತೊರೆದಿರಲಿಲ್ಲ.
ಹೀಗಿರುವಾಗ 1997ರಲ್ಲಿ ಬಾಂಗ್ಲಾದೇಶ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅಶೋಕ್ ಮೇಲೆ ಬಂಕರ್ ಕುಸಿದು ಬಿದ್ದಿತ್ತು. ಹಾಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿ, ಎರಡು ವರ್ಷಗಳನ್ನು ಆಸ್ಪತ್ರೆಯಲ್ಲೇ ಕಳೆಯಬೇಕಾಗಿತ್ತು. ನಂತರ 2000ನೇ ಇಸವಿಯಲ್ಲಿ ಕೆಲಸದಿಂದ ವಜಾಗೊಳಿಸಲಾಯಿತು.
ಆ ನಂತರದ 10 ವರ್ಷಗಳಿಂದ ತನಗೆ ನ್ಯಾಯ ಕೊಡಿ ಎಂದು ಅಲೆಯದ ಬೀದಿಗಳಿಲ್ಲ, ಕಾಲಿಡದ ಕಚೇರಿಗಳಿಲ್ಲ. ಆದರೆ ಯಾರೊಬ್ಬರಿಂದಲೂ ಸಹಾಯವಾಗಿಲ್ಲ ಎಂದು ಅಶೋಕ್ ಹೇಳಿಕೊಂಡಿದ್ದಾನೆ.
ತನಗೆ ನ್ಯಾಯ ಸಿಗದೇ ಇದ್ದರೆ ಇಡೀ ಕುಟುಂಬದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಇದೀಗ ಅಶೋಕ್ ಬೆದರಿಕೆ ಹಾಕಿದ್ದಾನೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಬಿ ಅಧಿಕಾರಿಗಳು, ವಜಾ ಪ್ರಕರಣವನ್ನು ತನಿಖೆಗೆ ಒಳಪಡಿಸುವುದಾಗಿ ಹೇಳಿದ್ದಾರೆ.