ಬಿಹಾರದ ಅಭಿವೃದ್ಧಿ ಯೋಜನೆಗಳಲ್ಲಿ ಅಕ್ರಮ ಎಸಗಲಾಗಿದೆ ಎಂಬ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಪಕ್ಷವೆಂದರೆ ಎಲ್ಲಾ ಭ್ರಷ್ಟಾಚಾರಗಳ ತಾಯಿಯಿದ್ದಂತೆ ಎಂದು ಬಣ್ಣಿಸಿದರು.
ಎಲ್ಲೆಡೆಯೂ ಭ್ರಷ್ಟಾಚಾರ, ಅಕ್ರಮಗಳನ್ನು ಪರಿಚಯಿಸಿದ್ದು ಕಾಂಗ್ರೆಸ್. ಇದು ಎಲ್ಲಾ ಭ್ರಷ್ಟಾಚಾರಗಳ ಮಾತೆ. ನೀವು ಬಿಹಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದೀರಿ, ಆದರೆ ತರಂಗಾಂತರ ಹಂಚಿಕೆ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಏನು ನಡೆದಿದೆ ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಜತೆ ಜಂಟಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡುತ್ತಾ ಪ್ರಶ್ನಿಸಿದರು.
ಪಾಟ್ನಾ ಸಾಹಿಬ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಬಿಹಾರದ ಎನ್‌ಡಿಎ ಸಂಚಾಲಕ ಹಾಗೂ ಹಿರಿಯ ಸಚಿವ ನಂದ ಕಿಶೋರ್ ಯಾದವ್ ಅವರ ಪರ ಸಂಯುಕ್ತ ಜನತಾದಳ ಮತ್ತು ಬಿಜೆಪಿಗಳು ಜಂಟಿಯಾಗಿ ಪ್ರಚಾರ ಸಭೆ ನಡೆಸುತ್ತಿವೆ.
ನಿತೀಶ್ ಆರೋಪಕ್ಕೆ ಸುಷ್ಮಾ ಸ್ವರಾಜ್ ಕೂಡ ಇದೇ ಸಂದರ್ಭದಲ್ಲಿ ದನಿಗೂಡಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಯಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರವನ್ನು ಎನ್‌ಡಿಎ ಸಂಸತ್ತಿನಲ್ಲಿ ಪ್ರಶ್ನಿಸಲಿದೆ ಎಂದರು.
ಕೇಂದ್ರದ ನಿಧಿಯನ್ನು ಸದುಪಯೋಗಪಡಿಸಿಕೊಳ್ಳಲು ಬಿಹಾರ ಸರಕಾರ ವಿಫಲವಾಗಿದೆ ಎಂದು ಸೋನಿಯಾ ಆರೋಪವನ್ನು ತಳ್ಳಿ ಹಾಕಿರುವ ನಿತೀಶ್, ಇದು ಆಧಾರ ರಹಿತ ಆರೋಪ ಎಂದರು.
ಬಿಹಾರಕ್ಕೆ ಕನಿಷ್ಠ ಒಂದು ಬಾರಿ ಭೇಟಿ ನೀಡಬೇಕು ಎಂದು ಕಳೆದ ಐದು ವರ್ಷಗಳ ಅವಧಿಯಲ್ಲಿ ನಾವು ಹಲವು ಬಾರಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿದ್ದೆವು. ಆದರೆ ಅವರು ಇದಕ್ಕೆ ಅವರು ಯಾವುದೇ ಧನಾತ್ಮಕ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಚುನಾವಣೆಯ ಸಂದರ್ಭದಲ್ಲಿ ಬಿಹಾರಕ್ಕೆ ಬಂದು, ಟೀಕಿಸುವ ಅವಕಾಶವಾದಿತನವನ್ನು ತೋರಿಸುತ್ತಿದ್ದಾರೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ನಮ್ಮ ಬೇಡಿಕೆಯ ಕತೆಯೇನಾಗಿದೆ ಎಂಬುದನ್ನು ಮೊದಲು ಹೇಳಿ ಎಂದು ಒತ್ತಾಯಿಸಿದರು.
2008ರಲ್ಲಿ ನಡೆದ ಹಿಂದೆಂದೂ ಕಂಡಿರದ ಭೀಕರ ಕೋಸಿ ನದಿ ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಮತ್ತು ಪರಿಹಾರ ನೀಡುವ ರಾಜ್ಯ ಸರಕಾರದ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರವು ಸಹಕಾರ ನೀಡಲಿಲ್ಲ ಎಂದೂ ನಿತೀಶ್ ಆರೋಪಿಸಿದದರು.
ಬಿಹಾರದ ಎಲ್ಲಾ 38 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿದಾಗ ಕೇಂದ್ರವು ಇತ್ತ ತಿರುಗಿಯೂ ನೋಡಲಿಲ್ಲ. ಈಗ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಜೆಡಿಯು ನಾಯಕ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡರು.