ಹಿಂದುಳಿದ ವರ್ಗಗಳ ಏಳ್ಗೆಗಾಗಿನ ಕೇಂದ್ರ ಸರಕಾರದ 20 ಅಂಶಗಳ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಜಾರಿಗೊಳಿಸಿದ ರಾಜ್ಯಗಳಲ್ಲಿ ಗುಜರಾತ್ ಮೊದಲನೇ ಸ್ಥಾನ ಪಡೆದುಕೊಂಡರೆ, ನಂತರದ ಸ್ಥಾನದಲ್ಲಿ ಕರ್ನಾಟಕ ಕಾಣಿಸಿಕೊಂಡಿದೆ. ಸಾಕಷ್ಟು ಕಚ್ಚಾಟಗಳ ನಡುವೆಯೂ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರಕಾರ ಇಂತಹ ಸಾಧನೆ ಮಾಡಿರುವುದು ಅಚ್ಚರಿ ಹುಟ್ಟಿಸಿದೆ.
20 ಅಂಶಗಳ ಕಾರ್ಯಕ್ರಮವನ್ನು 2010ರ ಏಪ್ರಿಲ್-ಜುಲೈಯಲ್ಲಿ ಜಾರಿಗೊಳಿಸಿದ ಉತ್ತಮ ರಾಜ್ಯಗಳನ್ನು ಗುರುತಿಸಿರುವುದು ಕೇಂದ್ರದ ಅಂಕಿ ಅಂಶ ಮತ್ತು ಯೋಜನೆ ಜಾರಿ ಸಚಿವಾಲಯ. ಅಚ್ಚರಿಯೆಂದರೆ ಅಗ್ರ 10 ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ರಾಜ್ಯಗಳು ಸ್ಥಾನ ಪಡೆದಿರುವುದು. ಬಹುತೇಕ ಕಾಂಗ್ರೆಸ್ ಸರಕಾರಗಳು ಕಳಪೆ ಸಾಧನೆಗಳನ್ನು ಮಾಡಿರುವುದನ್ನು ಕೂಡ ವರದಿ ಬೆಟ್ಟು ಮಾಡಿ ತೋರಿಸಿದೆ.
51 ಅಂಕಗಳನ್ನು ಪಡೆದುಕೊಂಡಿರುವ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿರುವ ಗುಜರಾತ್ ಮೊದಲ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನ ಕರ್ನಾಟಕ, ಜಾರ್ಖಂಡ್, ಪಂಜಾಪ್ ಮತ್ತು ಉತ್ತರ ಪ್ರದೇಶಗಳ ಪಾಲಾಗಿವೆ.
ಕಳೆದ ವರ್ಷದ ರಾಜ್ಯಗಳ ಸಾಧನೆ ಪಟ್ಟಿಯಲ್ಲಿ ಗುಜರಾತ್ ನಾಲ್ಕನೇ ಸ್ಥಾನದಲ್ಲಿದ್ದರೆ, ಕರ್ನಾಟಕ ಏಳನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಭಾರೀ ಮುನ್ನಡೆ ಸಾಧಿಸಿವೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ ಸಾಕಷ್ಟು ಭ್ರಷ್ಟಾಚಾರದ ಆರೋಪಗಳ ನಡುವೆಯೂ ಹಿಂದುಳಿದ ವರ್ಗಗಳ ಏಳ್ಗೆಗಾಗಿ ಶ್ರಮಿಸಿರುವುದು ಕೇಂದ್ರ ಪ್ರಕಟಿಸಿರುವ ವರದಿಯಲ್ಲಿ ಸ್ಪಷ್ಟವಾಗಿದೆ.
ಈಶಾನ್ಯ ರಾಜ್ಯಗಳೂ ಸೇರಿದಂತೆ ಬಿಹಾರ, ಪಶ್ಚಿಮ ಬಂಗಾಲ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಹಾಗೂ ಛತ್ತೀಸ್‌ಗಢ ಮುಂತಾದ ರಾಜ್ಯಗಳು ಕಳಪೆ ಸಾಧನೆ ಮಾಡಿವೆ ಎಂದು ವರದಿ ತಿಳಿಸಿದೆ.
ರಾಜ್ಯಗಳ ಸಾಧನೆಯ ಸ್ಥಾನ-ಮಾನಗಳನ್ನು ನಿರ್ಧರಿಸಲು 19 ಅಂಶಗಳನ್ನು ಮಾನದಂಡವಾಗಿ ಪರಿಗಣಿಸಲಾಗಿತ್ತು. ಸಮಾಜದ ಕೆಳಸ್ತರ ಮತ್ತು ಬಡವರ ಜೀವನ ಮಟ್ಟ ಸುಧಾರಣೆ, ಕೃಷಿಕರ ರಕ್ಷಣೆ, ಕಾರ್ಮಿಕರ ಅಭಿವೃದ್ಧಿ, ವಸತಿ, ಶಿಕ್ಷಣ, ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸುಧಾರಣೆ, ಪರಿಶಿಷ್ಟ ಜಾತಿ ಕುಟುಂಬಗಳಿಗೆ ಸಹಕಾರ, ಬಡತನ ನಿರ್ಮೂಲನೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಮುಂತಾದುವುಗಳನ್ನು ಪರಿಗಣಿಸಿ ರಾಜ್ಯಗಳ ಸಾಧನೆಯನ್ನು ಗುರುತಿಸಲಾಗಿದೆ.
ಉಳಿದಂತೆ ಮೊದಲೆರಡು ಸ್ಥಾನಗಳನ್ನು ಹೊರತುಪಡಿಸಿ ಉಳಿದ ಎಂಟು ಸ್ಥಾನಗಳಲ್ಲಿ ಕೇರಳ ಮತ್ತು ಮಧ್ಯಪ್ರದೇಶಗಳು ಕಾಣಿಸಿಕೊಂಡಿವೆ. ಇವೆರಡೂ ರಾಜ್ಯಗಳು ಏಳನೇ ಸ್ಥಾನವನ್ನು ಜಂಟಿಯಾಗಿ ಪಡೆದಿವೆ. ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶ 10ನೇ ಸ್ಥಾನ ಪಡೆದಿದೆ.
ಅಚ್ಚರಿಯ ವಿಚಾರವೆಂದರೆ ಅಗ್ರ ಐದರಲ್ಲಿ ಯಾವುದೇ ಕಾಂಗ್ರೆಸ್ ರಾಜ್ಯ ಸರಕಾರಗಳು ಸ್ಥಾನ ಪಡೆದುಕೊಳ್ಳದೇ ಇರುವುದು. ಇದು ಪಕ್ಷಕ್ಕೆ ತೀವ್ರ ಹಿನ್ನಡೆ ಎಂದೇ ಪರಿಗಣಿಸಲಾಗಿದೆ.
ಇದೇ ಹೊತ್ತಿಗೆ ವರದಿಯನ್ನು ಕಾಂಗ್ರೆಸ್ ಟೀಕಿಸಿದೆ. 71,000 ಕೋಟಿ ರೂಪಾಯಿಗಳ ಸಾಲ ಹೊಂದಿರುವ ಪಂಜಾಬ್ ರಾಜ್ಯಕ್ಕೆ (ಶಿರೋಮಣಿ ಅಕಾಲಿದಳ ಸರಕಾರ) ನಾಲ್ಕನೇ ಸ್ಥಾನವನ್ನು ನೀಡಿರುವುದು ಸರಿಯಲ್ಲ. ಈ ವರದಿಯನ್ನು ಸಿದ್ಧಪಡಿಸಿದವರಿಗೆ ವಾಸ್ತವಾಂಶಗಳ ಅರಿವಿದ್ದಂತಿಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.
ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಎಲ್ಲಾ ರಾಜ್ಯಗಳಿಗೆ ಪೂರಕ ಸಹಕಾರ ನೀಡುವಂತೆ ಕೇಂದ್ರ ಸಚಿವರುಗಳಿಗೆ ಮನವಿ ಮಾಡಿದ ಅಂಕಿ ಅಂಶ ಮತ್ತು ಯೋಜನೆ ಜಾರಿ ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಹಿಮಾಚಲ ಪ್ರದೇಶ, ತಮಿಳುನಾಡು, ರಾಜಸ್ತಾನ, ಗುಜರಾತ್ ಮತ್ತು ಉತ್ತರಾಖಂಡ ಸರಕಾರಗಳನ್ನು ಪ್ರಶಂಸಿಸಿದ್ದಾರೆ.
ರಾಜ್ಯಗಳ ಶ್ರೇಯಾಂಕ ಪಟ್ಟಿ: 1- ಗುಜರಾತ್ 2- ಕರ್ನಾಟಕ 3- ಜಾರ್ಖಂಡ್ 4- ಪಂಜಾಬ್ 5- ಉತ್ತರ ಪ್ರದೇಶ 7- ಕೇರಳ ಮತ್ತು ಮಧ್ಯಪ್ರದೇಶ 10- ಹಿಮಾಚಲ ಪ್ರದೇಶ, ಆಂಧ್ರಪ್ರದೇಶ 12- ದೆಹಲಿ, ರಾಜಸ್ತಾನ, ತಮಿಳುನಾಡು 15- ಹರ್ಯಾಣ 21- ಛತ್ತೀಸ್‌ಗಢ 22- ಅಸ್ಸಾಂ 23- ಮಹಾರಾಷ್ಟ್ರ, ಜಮ್ಮು-ಕಾಶ್ಮೀರ 26- ಪಶ್ಚಿಮ ಬಂಗಾಲ 27- ಬಿಹಾರ 30- ಮಣಿಪುರ
[ ವೆಬ್‌ದುನಿಯಾದ ಎಲ್ಲ ಕಾಮೆಂಟಿಗರಲ್ಲಿ ಮನವಿ: ಅಶ್ಲೀಲ, ಅಸಭ್ಯ, ಹೊಲಸು ಪದಗಳು ಬೇಡವೇ ಬೇಡ. ಅದರೊಂದಿಗೆ ಕಾಪಿ ಪೇಸ್ಟ್ ಮಾಡುವ ಕೆಟ್ಟ ಚಾಳಿಯೂ ಬೇಡ. ತಮ್ಮ ಹೆಸರು ಬರೆಯುವ ಧೈರ್ಯವಿಲ್ಲದೆ ಬೇರೆಯವರ ಹೆಸರಲ್ಲಿ ಕೊಳಕು ಬರೆಯುವುದೂ ಬೇಡ. ಇಂಥದ್ದು ಕಂಡರೆ, ಓದುಗರು ದಯವಿಟ್ಟು ಕೂಡಲೇ ರಿಪೋರ್ಟ್ ಅಬ್ಯೂಸ್ ದಯವಿಟ್ಟು ಚರ್ಚೆಗೆ ಈ ವೇದಿಕೆಯನ್ನು ಬಳಸಿಕೊಳ್ಳಿ. ]