ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾವೇರಿ ನೀರಿಗೆ ತಮಿಳುನಾಡು ಭಿಕ್ಷೆ ಬೇಡುತ್ತಿಲ್ಲ: ಜಯಲಲಿತಾ (Jayalalithaa | M Karunanidhi | Tamil Nadu | Cauvery issue)
Bookmark and Share Feedback Print
 
ಕಾವೇರಿ ನೀರಿಗಾಗಿ ತಮಿಳುನಾಡು ಭಿಕ್ಷೆ ಬೇಡುತ್ತಿಲ್ಲ, ಅದು ನಮ್ಮ ಹಕ್ಕು ಎಂದಿರುವ ಎಐಎಡಿಎಂಕೆ ವರಿಷ್ಠೆ ಜಯಲಲಿತಾ, ಕೇಂದ್ರದ ಜತೆ ಹೊಂದಿರುವ ಸಂಬಂಧವನ್ನು ಬಳಸಿಕೊಂಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರು ಜನತೆಯ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕವು ಕಾವೇರಿ ನೀರನ್ನು ಬಿಡದೇ ಇರುವ ಪ್ರಕರಣವನ್ನು ಕಾನೂನು ಹೋರಾಟದ ಮೂಲಕ ಎದುರಿಸಲಾಗುತ್ತದೆ ಎಂದು ಕರುಣಾನಿಧಿ ಹೇಳಿದ್ದಾರೆ. ಇದು ದಾರಿ ತಪ್ಪಿಸುವ ತಂತ್ರ ಎಂದು ಡಿಎಂಕೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾವೇರಿ ಜಲ ಪ್ರಾಧಿಕಾರದ ಅಂತಿಮ ತೀರ್ಪಿನ ಪ್ರಕಾರ ಕರ್ನಾಟಕವು ತಮಿಳುನಾಡಿಗೆ ನೀರು ಹರಿಸುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಹೀಗೆ ನಡೆದುಕೊಂಡು ಬಂದಿದ್ದರೂ, ಡಿಎಂಕೆ ಸರಕಾರವು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಜಯಲಲಿತಾ ಆರೋಪಿಸಿದರು.

ನೀರಿಗಾಗಿ ರಾಜ್ಯವು ಭಿಕ್ಷೆ ಬೇಡುತ್ತಿಲ್ಲ, ತನ್ನ ಹಕ್ಕಿನ ಪಾಲನ್ನು ಮಾತ್ರ ಕೇಳುತ್ತಿದೆ ಎಂದಿರುವ ಅವರು, ರಾಜ್ಯ ಸರಕಾರವು ಕರ್ನಾಟಕವು ನೀರು ಹರಿಸುವಂತೆ ನೋಡಿಕೊಳ್ಳಬೇಕು; ಕಾವೇರಿ ನೀರನ್ನೇ ವ್ಯವಸಾಯಕ್ಕಾಗಿ ಅವಲಂಬಿಸಿರುವ ನದಿಪಾತ್ರ ಪ್ರಾಂತ್ಯದ ಕೃಷಿಕರ ಮೇಲೆ ಪ್ರಸಕ್ತ ಸ್ಥಿತಿ ಗಾಢ ದುಷ್ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾವೇರಿ ನೀರು ನಿಗದಿತ ಸಂದರ್ಭದಲ್ಲಿ ನಿಗದಿತ ಪ್ರಮಾಣದಲ್ಲಿ ಹರಿದು ಬರುವಂತೆ ಮಾಡಲು ಚೆನ್ನೈಯಲ್ಲಿ ನಾಲ್ಕು ದಿನಗಳ ಉಪವಾಸ ಸೇರಿದಂತೆ ತನ್ನಿಂದ ಸಾಧ್ಯವಾದ ಎಲ್ಲಾ ಯತ್ನಗಳನ್ನು ನಡೆಸಿದ್ದೆ ಎಂದು ಜಯಲಲಿತಾ ಹೇಳಿಕೊಂಡರು.

ತಮಿಳುನಾಡು ಸರಕಾರವು ಪತ್ರ ಬರೆದ ನಂತರವೂ ಕರ್ನಾಟಕವು ನೀರು ಬಿಡುಗಡೆ ಮಾಡದೇ ಇದ್ದರೆ, ಕರುಣಾನಿಧಿಯವರು ನೇರವಾಗಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆ ಮಾತನಾಡಬೇಕಿತ್ತು ಅಥವಾ ಈ ವಿಚಾರವನ್ನು ಪ್ರಧಾನ ಮಂತ್ರಿ ನೇತೃತ್ವದಲ್ಲಿ ಎರಡೂ ರಾಜ್ಯಗಳ ನಡುವೆ ಮಾತುಕತೆ ನಡೆಯುವಂತೆ ನೋಡಿಕೊಳ್ಳಬೇಕಿತ್ತು ಎಂದರು.

ಕರುಣಾನಿಧಿಯವರ ಬದ್ಧವೈರಿ ಎಂದೇ ಗುರುತಿಸಿಕೊಂಡು ಬಂದಿರುವ, ಪ್ರಸಕ್ತ ತಮಿಳುನಾಡು ರಾಜಕೀಯದಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಜಯಲಲಿತಾ ಅವಕಾಶ ಸಿಕ್ಕಿದಾಗಲೆಲ್ಲ ರಾಜ್ಯ ಸರಕಾರದ ವಿರುದ್ಧ ಮುಗಿ ಬೀಳುತ್ತಾ ಬಂದವರು. ಇದೀಗ ಕಾವೇರಿ ವಿವಾದವನ್ನು ಕೆದಕುತ್ತಿದ್ದಾರೆ.

ಮೆಟ್ಟೂರು ಜಲಾಶಯದಿಂದ ತಮಗೆ ಸೂಕ್ತ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಇದರಿಂದ ಬೇಸಾಯಕ್ಕೆ ತೊಂದರೆಯಾಗಿದೆ ಎಂದು ಕಾವೇರಿ ನದಿಪಾತ್ರದ ರೈತರು ದೂರು ನೀಡುತ್ತಿದ್ದಾರೆ ಎಂದಿರುವ ಜಯಲಲಿತಾ, ಕರುಣಾನಿಧಿ ತಾನು ಕೇಂದ್ರದ ಜತೆ ಹೊಂದಿರುವ ಸಂಬಂಧವನ್ನು ಬಳಸಿಕೊಂಡು ಕರ್ನಾಟಕದಿಂದ ನೀರು ಪಡೆಯುವಂತೆ ನೋಡಿಕೊಳ್ಳಬೇಕು; ಅಲ್ಲದೆ ವ್ಯವಸಾಯದ ಮೇಲೆ ತೊಂದರೆಯಾದರೆ ಪರಿಹಾರವನ್ನು ಕೂಡ ಪಡೆಯಬೇಕು. ಅದನ್ನು ಕರ್ನಾಟಕದಿಂದಲೇ ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ