ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಂಬಿ ಪ್ಲೀಸ್, ಈ ಹೆಣ್ಣುಮಗಳ ಉಪವಾಸಕ್ಕೀಗ 10 ವರ್ಷ! (Iron Lady | Irom Sharmila | Manipur | AFSPA)
Bookmark and Share Feedback Print
 
PR
ವಿಶೇಷ ಸೇನಾಧಿಕಾರವನ್ನು ಬಳಸಿಕೊಂಡು ಸೈನಿಕರು ನಡೆಸಿದ ಅನಾಚಾರಗಳನ್ನು ಸಹಿಸಿಕೊಳ್ಳಲು ಆಕೆಗೆ ಸಾಧ್ಯವಾಗಲೇ ಇಲ್ಲ. ತನ್ನ ಕಣ್ಣೆದುರೇ ಕೋಳಿ ಪಿಳ್ಳೆಗಳನ್ನು ತರಿದಂತೆ ಬರೋಬ್ಬರಿ ಹತ್ತು ಮಂದಿ ಅಮಾಯಕರನ್ನು ಸೇನೆ ಗುಂಡಿಕ್ಕಿ ಕೊಂದು ಹಾಕಿತ್ತು. ಇದನ್ನು ಕಂಡ ಆಕೆಗೆ ಊಟ ಬೇಕೆಂದು ಅಂದಿನಿಂದ ಇಂದಿನವರೆಗೂ ಅನ್ನಿಸಿಲ್ಲ. ಇಂತಹ ಉಪವಾಸ ಆರಂಭವಾಗಿ ಹತ್ತು ವರ್ಷಗಳೇ ನಡೆದು ಹೋಗಿವೆ. ಆದರೆ ತನ್ನ ಗಾಂಧಿ ಮಾರ್ಗವನ್ನು ಬಿಟ್ಟಿಲ್ಲ.

ಆಕೆಯ ಹೆಸರು ಇರೋಮ್ ಚಾನು ಶರ್ಮಿಳಾ. ಈಗ ವಯಸ್ಸು 38. ಹೋರಾಟಗಾರರ ವಲಯದಲ್ಲಿ ಈ ಶರ್ಮಿಳಾ 'ಉಕ್ಕಿನ ಮಹಿಳೆ'ಯೆಂದೇ ಪ್ರಸಿದ್ಧಿ. ಮಣಿಪುರದಲ್ಲಿರುವ ಸಶಸ್ತ್ರ ಪಡೆಗಳ 1958ರ ವಿಶೇಷಾಧಿಕಾರ ಕಾಯ್ದೆಯನ್ನು ರದ್ದುಪಡಿಸಬೇಕೆನ್ನುವುದು ಆಕೆಯ ಒತ್ತಾಯ. ಕೇಳಬೇಕಾದ ರಾಜಕಾರಣಿಗಳು ಕೇಳಿದಂತೆ ಮಾಡಿ, ಕಾಣದಂತೆ ಮಾಯವಾಗುತ್ತಿದ್ದಾರೆ.

ಆದರೂ ಶರ್ಮಿಳಾ ತನ್ನ ಪಟ್ಟು ಸಡಿಸಿಲ್ಲ. ನವೆಂಬರ್ 4, 2000ದಂದು (ಕೆಲವು ವರದಿಗಳ ಪ್ರಕಾರ ನವೆಂಬರ್ 2ರಂದು) ಆರಂಭಿಸಿದ ಉಪವಾಸ ಸತ್ಯಾಗ್ರಹವನ್ನು ಎಷ್ಟೇ ಒತ್ತಡಗಳು ಬಂದರೂ ಕೈ ಬಿಟ್ಟಿಲ್ಲ. ಆ ಅವಿರತ ಉಪವಾಸಕ್ಕೆ ಮುಂದಿನ ತಿಂಗಳಿನ ನವೆಂಬರ್ 4ರಂದು 10 ವರ್ಷ ತುಂಬುತ್ತಿದೆ. ಆದರೂ ಕಾಯ್ದೆ ಸಡಿಲಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ನಡೆದದ್ದೇನು?
ಹತ್ತು ವರ್ಷಗಳ ಹಿಂದೆ ಅಂದರೆ 1-10-2000ದಂದು ಮಣಿಪುರದ ಇಂಫಾಲದ ಮಾಲೂಮ್ ಎಂಬಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ 10 ಮಂದಿ ಅಮಾಯಕರನ್ನು ಅಸ್ಸಾಂ ರೈಪಲ್ಸ್ ಪಡೆಯು ಗುಂಡಿಕ್ಕಿ ಕೊಂದು ಹಾಕಿತ್ತು. ಇದರ ಹಿಂದಿನ ಕಾರಣ ಸೇನಾ ತುಕಡಿಯ ಮೇಲೆ ಬಂಡುಕೋರರು ಬಾಂಬ್ ದಾಳಿ ನಡೆಸಿದ್ದು.

ಅಮಾಯಕರ ಹತ್ಯಾಕಾಂಡ ನಡೆದ ಬೆನ್ನಿಗೆ ಸಮಾಜ ಸೇವಾ ಸಂಘಟನೆಗಳು ಸೇರಿದಂತೆ ಮಣಿಪುರದ ಜನತೆ ಭಾರೀ ಪ್ರತಿಭಟನೆ ಆರಂಭಿಸಿದರು. ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಆದರೆ ಸೇನಾ ಕಾಯ್ದೆಯ ಬಲ ಹೊಂದಿದ್ದ ಸೇನೆ, ಇಂತಹ ಯಾವುದೇ ತನಿಖೆಗೆ ನಿರಾಕರಿಸಿತು.
PR

ಇದರಿಂದ ಎಲ್ಲರಿಗಿಂತ ಹೆಚ್ಚು ನಿರಾಸೆಗೊಂಡದ್ದು ಆಗ 28ಷ್ಟೇ ತುಂಬಿದ್ದ ಯುವತಿ ಶರ್ಮಿಳಾ. ನವೆಂಬರ್ 4ರಂದು ಸಂಜೆ ತನ್ನ ತಾಯಿ ಶಖಿ ದೇವಿ ಆಶೀರ್ವಾದ ಪಡೆದುಕೊಂಡ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿಯೇ ಬಿಟ್ಟಿದ್ದಳು.

ಈಕೆಯ ಉಪವಾಸ ಸತ್ಯಾಗ್ರಹವನ್ನು ಕೆಲವರು ಅಪಹಾಸ್ಯ ಮಾಡಿದರು. ಜತೆಗಿದ್ದ ಕೆಲವರು ಕೆಲ ದಿನ ಉಪವಾಸ ಮಾಡಿ ಕೈಬಿಟ್ಟರು. ಸಹಕಾರ ನೀಡಲೆಂದು ಕೆಲವೇ ಕೆಲವು ಮಂದಿ ಉಳಿದುಕೊಂಡು ಬಿಟ್ಟರು. ಆದರೂ ಶರ್ಮಿಳಾ ಧೃತಿಗೆಡಲಿಲ್ಲ.

ಆದರೆ ಪೊಲೀಸರು ಸುಮ್ಮನಿರಲಿಲ್ಲ. ಉಪವಾಸ ಆರಂಭಿಸಿದ ಮೂರೇ ದಿನಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿದಳು ಎಂಬ ಆರೋಪದ ಮೇಲೆ ಬಂಧಿಸಿದರು. ನ್ಯಾಯಾಂಗ ಕಸ್ಟಡಿಗೂ ಒಪ್ಪಿಸಿದರು. ಯಾರು ಏನೇ ಮಾಡಿದರೂ ಶರ್ಮಿಳಾ ಊಟ ಮಾಡಲು, ನೀರು ಕುಡಿಯಲು ಒಪ್ಪಲಿಲ್ಲ.

ಆರೋಗ್ಯ ದಿನದಿಂದ ದಿನಕ್ಕೆ ಹದಗೆಡಲಾರಂಭಿಸಿತು. ಈಕೆಯನ್ನು ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಭಾವಿಸಿದ ಆಡಳಿತವು ಶರ್ಮಿಳಾಳ ಮೂಗಿನ ಮೂಲಕ ಪೈಪ್ ತಳ್ಳಿ ಬಲವಂತದಿಂದ ಆಹಾರವನ್ನು ಹೊಟ್ಟೆಗೆ ದಬ್ಬಲಾರಂಭಿಸಿತು.

ಶರ್ಮಿಳಾ ಒತ್ತಡಕ್ಕೆ ಭಾಗಶಃ ಮಣಿದಿದ್ದ ಮಣಿಪುರ ಸರಕಾರವು ಸೇನಾ ಕಾಯ್ದೆಯನ್ನು ರಾಜ್ಯದ ಏಳು ವಿಧಾನಸಭಾ ಕ್ಷೇತ್ರಗಳಿಂದ 2004ರ ಆಗಸ್ಟ್ 12ರಂದು ಹಿಂದಕ್ಕೆ ಪಡೆದಿತ್ತು. ಆದರೂ ಶರ್ಮಿಳಾ ಸಮಾಧಾನಗೊಂಡಿರಲಿಲ್ಲ. ರಾಜ್ಯದಲ್ಲಿ ಸಂಪೂರ್ಣವಾಗಿ ಕಾಯ್ದೆಯನ್ನು ರದ್ದುಪಡಿಸಬೇಕು ಎನ್ನುವುದು ಆಕೆಯ ಒತ್ತಾಯ.

ಅದು ಅಂದಿನಿಂದ ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಶರ್ಮಿಳಾ ತನ್ನ ಹೋರಾಟದಿಂದ, ಉಪವಾಸ ಸತ್ಯಾಗ್ರಹದಿಂದ ಹಿಂದಕ್ಕೆ ಸರಿದಿಲ್ಲ.

ಶರ್ಮಿಳಾ ಮಾತುಗಳು...
ಮಣಿಪುರದಿಂದ ಎಎಫ್ಎಸ್‌ಪಿಎ ಕಾಯ್ದೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯದ ಹೊರತು ನಾನು ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವುದಿಲ್ಲ. ಜನ ಒಂದಲ್ಲ ಒಂದು ದಿನ ಸಾಯಲೇ ಬೇಕು. ಆದರೆ ತನ್ನ ಜೀವಿತಾವಧಿಯಲ್ಲಿ ಪ್ರತಿಯೊಬ್ಬರೂ ತಮ್ಮ ಸ್ವಾಭಿಮಾನವನ್ನು ಉಳಿಸಿಕೊಳ್ಳಬೇಕು ಎನ್ನುವುದು ಶರ್ಮಿಳಾ ಮಾತು.

ಇತ್ತೀಚೆಗಷ್ಟೇ 51 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹೊಂದಿದ್ದ ರವೀಂದ್ರನಾಥ್ ಠಾಗೋರ್ ಶಾಂತಿ ಪ್ರಶಸ್ತಿ ಶರ್ಮಿಳಾ ಮುಡಿಗೇರಿತ್ತು.
ಅದಕ್ಕೂ ಮೊದಲು ದಕ್ಷಿಣ ಕೊರಿಯಾ ಸರಕಾರವು ತನ್ನ ದೇಶದ ಮಾನವ ಹಕ್ಕುಗಳ ಹೋರಾಟಗಾರರಿಗಾಗಿನ ಉನ್ನತ ಪ್ರಶಸ್ತಿಯನ್ನು ಶರ್ಮಿಳಾಗೆ ನೀಡಿ ಗೌರವಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ