ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಪನ್ಯಾಸಕನ ಕೈ ಕತ್ತರಿಸಿದವನಿಗೆ ಚುನಾವಣೆಯಲ್ಲಿ ಗೆಲುವು!
(Hand-chopping case | Kerala civic polls | Anas | TJ Joseph)
ತಿರುವನಂತಪುರಂ, ಶನಿವಾರ, 30 ಅಕ್ಟೋಬರ್ 2010( 09:24 IST )
ಇದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ದೌರ್ಬಲ್ಯವೋ ಅಥವಾ ಪ್ರಬುದ್ಧ ಮತದಾರರ ಕೊರತೆಯೋ-- ಇತ್ತೀಚೆಗಷ್ಟೇ ಉಪನ್ಯಾಸಕರೊಬ್ಬರ ಕೈ ಕತ್ತರಿಸಿದ್ದ ಆರೋಪಿಗಳಲ್ಲಿ ಒಬ್ಬನಾಗಿರುವ ವ್ಯಕ್ತಿಯೊಬ್ಬ ಕೇರಳ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ್ದಾನೆ, ಅದೂ ಜೈಲಿನಲ್ಲಿದ್ದುಕೊಂಡು!
ಪ್ರವಾದಿ ಮೊಹಮ್ಮದ್ ಉಲ್ಲೇಖವನ್ನು ಪ್ರಶ್ನೆಪತ್ರಿಕೆಯಲ್ಲಿ ಮಾಡಿದ ಆರೋಪದ ಮೇಲೆ ಕಾಲೇಜು ಉಪನ್ಯಾಸಕ ಟಿ.ಜೆ. ಜೋಸೆಫ್ ಅವರ ಮೇಲೆ ಹಲ್ಲೆ ನಡೆಸಿದ್ದ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಅವರ ಕೈ ಕತ್ತರಿಸಿದ್ದರು.
PR
ಈ ಆರೋಪಿಗಳಲ್ಲಿ ಒಬ್ಬನಾಗಿರುವ ಅನಸ್ ಎಂಬಾತ ಇದೀಗ ಎರ್ನಾಕುಲಂ ಜಿಲ್ಲೆಯ ವಳಕ್ಕುಲಂ ಬ್ಲಾಕ್‌ನ ವಂಚಿನಾಡ್ ವಿಭಾಗದಲ್ಲಿ ಜಯ ಗಳಿಸಿದ್ದಾನೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಅಂಗವಾಗಿರುವ 'ಸೋಷಿಯಲಿಸ್ಟ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ'ದಿಂದ ಟಿಕೆಟ್ ಪಡೆದುಕೊಂಡು ಅನಸ್ ಚುನಾವಣಾ ಕಣಕ್ಕಿಳಿದಿದ್ದ.
ಪ್ರಸಕ್ತ ನ್ಯಾಯಾಂಗ ವಶದಲ್ಲಿರುವ ಆರೋಪಿ, ವಿಯ್ಯೂರ್ ಸೆಂಟ್ರಲ್ ಜೈಲಿನಲ್ಲಿದ್ದಾನೆ. ಈತ ತನ್ನ ನಿಕಟ ಎದುರಾಳಿ ಯುಡಿಎಫ್ ಅಭ್ಯರ್ಥಿಯನ್ನು 1,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದಾನೆ.
ಕೈ ಕತ್ತರಿಸಿದ ಪ್ರಕರಣದಲ್ಲಿ 47ನೇ ಆರೋಪಿಯಾಗಿರುವ ಅನಸ್, ಚುನಾವಣೆಗೆ ಸ್ಪರ್ಧಿಸಲು ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದ. ವಿಶೇಷ ಎಂದರೆ ಆತ ಚುನಾವಣಾ ಪ್ರಚಾರ ಬಿಡಿ, ತನ್ನ ಮತವನ್ನೂ ಚಲಾಯಿಸಿರಲಿಲ್ಲ.
ವರದಿಗಳ ಪ್ರಕಾರ ಅನಸ್ ಜಯದಲ್ಲಿ ಪ್ರಮುಖ ಪಾತ್ರವಹಿಸಿರುವುದು ಮುಸ್ಲಿಮರು. ಪ್ರವಾದಿ ಮೊಹಮ್ಮದ್ ಅವರಿಗೆ ಉಪನ್ಯಾಸಕ ಅಪಚಾರ ಮಾಡಿದ್ದಾರೆ ಎಂದು ಪ್ರಚಾರ ಮಾಡಿ ಮುಸ್ಲಿಮರ ಒಲವು ಗಿಟ್ಟಿಸುವಲ್ಲಿ ಪಕ್ಷವು ಸಫಲವಾಗಿದೆ ಎಂದು ಹೇಳಲಾಗಿದೆ.