ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮಿತ್ ಶಾ ರಾತೋರಾತ್ರಿ ಜೈಲಿನಿಂದ ಔಟ್; ಸಿಬಿಐ ಸುಪ್ರೀಂಗೆ (CBI | Amit Shah | Gujarat | Sohrabuddin Sheikh)
Bookmark and Share Feedback Print
 
ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯೆಂದು ಸಿಬಿಐಯಿಂದ ಬಂಧಿಸಲ್ಪಟ್ಟ ನಂತರ ನಿನ್ನೆ ಸಂಜೆ ಹೊತ್ತಿಗಷ್ಟೇ ಹೈಕೋರ್ಟಿನಿಂದ ಜಾಮೀನು ಪಡೆದುಕೊಂಡಿದ್ದ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ರಾತೋರಾತ್ರಿಯೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಹೈಕೋರ್ಟಿನಲ್ಲಾದ ಸೋಲಿನಿಂದ ತೀವ್ರ ಮುಖಭಂಗ ಅನುಭವಿಸಿರುವ ಸಿಬಿಐ, ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದುಪಡಿಸಬೇಕೆಂದು ಸಿಬಿಐ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್ ನೀಡಿರುವ ಜಾಮೀನಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ನಿರ್ಧಾರಕ್ಕೆ ಸಿಬಿಐ ಮುಖ್ಯಸ್ಥರು ಬಂದ ನಂತರ ರಾತ್ರಿ 10.30ಕ್ಕೆ ಡೆಪ್ಯುಟಿ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ ವಕೀಲರು, ಶಾಗೆ ನೀಡಲಾಗಿರುವ ಜಾಮೀನನ್ನು ರದ್ದುಪಡಿಸುವ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಇದನ್ನು ತುರ್ತು ವಿಚಾರಣೆಗೆ ಸ್ವೀಕರಿಸಬೇಕೆಂದು ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವಾಗ ಸಿಬಿಐ ಪರ ಹೈಕೋರ್ಟಿನಲ್ಲಿ ವಾದಿಸಿದ್ದ ಹಿರಿಯ ವಕೀಲ ಕೆ.ಟಿ.ಎಸ್. ತುಳಸಿಯವರು ಸಿಬಿಐ ಅಧಿಕಾರಿಗಳ ಜತೆಗಿದ್ದರು.

ದೀಪಾವಳಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೋಮವಾರದಿಂದ ಬಹುತೇಕ ಬಿಡುವಿನಲ್ಲಿರುತ್ತದೆ. ಈ ಸಂದರ್ಭದಲ್ಲಿ ಡೆಪ್ಯುಟಿ ರಿಜಿಸ್ಟ್ರಾರ್ ನ್ಯಾಯಾಲಯದ ರಜಾಕಾಲದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ.

ಸಿಬಿಐ ಅರ್ಜಿ ಇಂದು ರಜಾಕಾಲದ ಪೀಠದ ಎದುರು ವಿಚಾರಣೆಗೆ ಬರುವ ಸಾಧ್ಯತೆಗಳಿವೆ.

ರಾತೋರಾತ್ರಿ ಬಿಡುಗಡೆ...
ಸೊಹ್ರಾಬುದ್ದೀನ್ ಹತ್ಯೆ ಸಂಬಂಧ ಜುಲೈ 25ರಂದು ಸಿಬಿಐಯಿಂದ ಬಂಧಿಸಲ್ಪಟ್ಟಿದ್ದ ಶಾ ಅವರಿಗೆ ಸಿಬಿಐ ನ್ಯಾಯಾಲಯವು ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಶಾ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಸಾಮಾನ್ಯವಾಗಿ ಹೀಗೆ ಜಾಮೀನು ದೊರೆತಲ್ಲಿ, ಆರೋಪಿ ಬಿಡುಗಡೆಯಾಗಲು ಕನಿಷ್ಠ 24 ಗಂಟೆ ಸಮಯ ಬೇಕಾಗುತ್ತದೆ. ಜತೆಗೆ ಜಾಮೀನು ಸಿಕ್ಕಿರುವುದು ಶುಕ್ರವಾರವಾಗಿದ್ದ ಕಾರಣ, ಊಹೆಯ ಪ್ರಕಾರ ಸೋಮವಾರವಷ್ಟೇ ಬಿಡುಗಡೆಯಾಗಬೇಕಿತ್ತು.

ಅಚ್ಚರಿಯೆಂದರೆ ರಾತ್ರಿ 10 ಗಂಟೆ ಹೊತ್ತಿಗೆ ಮಾಜಿ ಸಚಿವ ಶಾ ಅಹಮದಾಬಾದಿನ ಸಾಬರಮತಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. 90 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದ ಅವರು ರಾತೋರಾತ್ರಿ ಬಿಡುಗಡೆಯಾಗಿ ನಿರಾಳರಾಗಿದ್ದಾರೆ.

ಇದು ನ್ಯಾಯಕ್ಕಾಗಿನ ಹೋರಾಟ. ನ್ಯಾಯವು ಯಾವತ್ತೂ ಸತ್ಯದ ಹತ್ತಿರವಿರುತ್ತದೆ. ನಾವು ಸತ್ಯದ ಹಾದಿಯಲ್ಲಿರುವುದರಿಂದ ಈ ಪ್ರಕರಣದಲ್ಲಿ ನಾವು ಗೆಲುವು ಸಾಧಿಸುವುದು ಖಚಿತ ಎಂದು ತನ್ನ ನಿವಾಸದ ಹೊರಗಡೆ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ಶಾ ಸಂದೇಶ ನೀಡಿದ್ದಾರೆ.

ಬಂಧನಕ್ಕೊಳಗಾದ ನಂತರ ಪ್ರತಿ ಹಂತದಲ್ಲೂ ತನ್ನನ್ನು ಬೆಂಬಲಿಸಿದ ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ, ನಿತಿನ್ ಗಡ್ಕರಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ತನ್ನ ಕುಟುಂಬದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಆದರೆ ಈ ಸಂತಸದ ಎಷ್ಟು ದಿನ ಮುಂದುವರಿಯತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್ ನಿರ್ಧರಿಸಬೇಕಿದೆ. ಹೈಕೋರ್ಟ್ ನೀಡಿರುವ ಜಾಮೀನು ರದ್ದಾದಲ್ಲಿ ಶಾ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ