ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನ್ಯಾಯಾಧೀಶರ ದಿಕ್ಕು ತಪ್ಪಿಸಲು ಕಸಬ್ ನಾಟಕ: ನಿಕ್ಕಂ (Pakistani terrorist | Ajmal Kasab | Ujjwal Nikam | Mumbai attacks)
Bookmark and Share Feedback Print
 
ಮುಂಬೈ ಮೇಲಿನ ಭಯಾನಕ ದಾಳಿಯಲ್ಲಿನ ತನ್ನ ಪಾತ್ರದ ಕುರಿತು ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರಲ್ಲಿ ಗೊಂದಲವನ್ನು ಸೃಷ್ಟಿಸುವ ಸಲುವಾಗಿ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಮೀರ್ ಅಜ್ಮಲ್ ಕಸಬ್ ಹತ್ತುಹಲವು ನಾಟಕಗಳನ್ನು ಮಾಡಿದ್ದಾನೆ ಎಂದು ಸರಕಾರಿ ವಕೀಲ ಉಜ್ವಲ್ ನಿಕ್ಕಂ ಬಾಂಬೆ ಹೈಕೋರ್ಟಿನಲ್ಲಿ ಹೇಳಿದ್ದಾರೆ.

ವಿಚಾರಣಾ ನ್ಯಾಯಾಲಯವು ಕಸಬ್‌ಗೆ ನೀಡಿರುವ ಮರಣ ದಂಡನೆಯನ್ನು ಖಚಿತಪಡಿಸುವ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿದ್ದು, ವಿಭಾಗೀಯ ಪೀಠದ ಮುಂದೆ ಹಾಜರಾದ ನಿಕ್ಕಂ, 'ಆರಂಭದಲ್ಲಿ ಮುಂಬೈ ದಾಳಿಯ ಕುರಿತ ತನ್ನ ಪಾತ್ರವನ್ನು ಒಪ್ಪಿಕೊಂಡು ಹೇಳಿಕೆ ನೀಡಿದ್ದ ಕಸಬ್, ನಂತರ ಅದನ್ನು ತಳ್ಳಿ ಹಾಕಿದ್ದಾನೆ. ಇವೆಲ್ಲ ಆತನ ಪಾಕಿಸ್ತಾನ ಲಷ್ಕರ್ ಇ ತೋಯ್ಬಾ ಬಾಸ್‌ಗಳು ನೀಡಿರುವ ಚಾಣಾಕ್ಷತನದ ತರಬೇತಿಯ ಪರಿಣಾಮ' ಎಂದರು.
PTI

ಕಸಬ್ ವಿರುದ್ಧದ ಸಾಕ್ಷ್ಯಗಳನ್ನು ಹಾಜರುಪಡಿಸಿದಾಗ ಆತನ ನಿಲುವು ಏನಾಗಿತ್ತು ಎಂದು ನ್ಯಾಯಮೂರ್ತಿಗಳಾದ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆಯವರು ಪ್ರಶ್ನಿಸಿದಾಗ ನಿಕ್ಕಂ ಮೇಲಿನಂತೆ ಪ್ರತಿಕ್ರಿಯಿಸಿದರು.

ತಾನು ಮತ್ತು ಇತರ ಒಂಬತ್ತು ಮಂದಿ ಭಯೋತ್ಪಾದಕರು ಪಾಕಿಸ್ತಾನದಿಂದ ಬಂದು 2008ರ ನವೆಂಬರ್ 26ರಂದು ಮುಂಬೈಯಲ್ಲಿನ ಪ್ರಮುಖ ಜಾಗಗಳಲ್ಲಿ ಗುಂಡಿನ ಮಳೆಗರೆದು ನೂರಾರು ಮಂದಿಯನ್ನು ಕೊಂದು ಹಾಕಿದ್ದೆವು ಎಂದು ಮ್ಯಾಜಿಸ್ಟ್ರೇಟ್ ಒಬ್ಬರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ ಕಸಬ್, ನಂತರ ವಿಚಾರಣಾ ನ್ಯಾಯಾಲಯದ ಎದುರು ಆರೋಪವನ್ನು ನಿರಾಕರಿಸಿದ್ದ. ತಾನು ಸ್ವಇಚ್ಛೆಯಿಂದ ತಪ್ಪೊಪ್ಪಿಗೆ ನೀಡಿರಲಿಲ್ಲ, ಪೊಲೀಸರ ಬಲವಂತದಿಂದಾಗಿ ಹಾಗೆ ಮಾಡಿದ್ದೆ ಎಂದು ಹೇಳಿದ್ದ ಎಂದು ನಿಕ್ಕಂ ಹೈಕೋರ್ಟಿಗೆ ವಿವರಣೆ ನೀಡಿದರು.

ಬಳಿಕ ವಿಚಾರಣಾ ನ್ಯಾಯಾಲಯದಲ್ಲಿ ತನ್ನ ಮೇಲಿನ ಆರೋಪಗಳನ್ನು ಕಡಿಮೆ ಮಾಡುತ್ತಾ, ದೊಡ್ಡ ಆರೋಪಗಳನ್ನು ಸಾವನ್ನಪ್ಪಿದ ಉಗ್ರ ಅಬೂ ಇಸ್ಲಾಯಿಲ್ ಮೇಲೆ ಹಾಕುತ್ತಾ ಹೋದ. ಆತ ತನ್ನ ನಾಯಕ ಎಂದು ಹೇಳಿದ್ದನ್ನು ಕೂಡ ನ್ಯಾಯಾಲಯಕ್ಕೆ ವಿವರಿಸಲಾಯಿತು.

ತನ್ನನ್ನು ಮುಂಬೈ ದಾಳಿಗೂ ಮೊದಲು 'ರಾ' ಬಂಧಿಸಿತ್ತು. ಜಿಯೋ ಟಿವಿ ಚಾನೆಲ್ ರಾ ಏಜೆಂಟ್ ಎಂದು ಆತ ಕೆಳಗಿನ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ದಾಖಲೆಗಳನ್ನು ನಿಕ್ಕಂ ಹೈಕೋರ್ಟಿಗೆ ಸಲ್ಲಿಸಿದರು.

ಜಿಯೋ ಟಿವಿ ಮೇಲೆ ಕಸಬ್ ಆ ರೀತಿಯ ಆರೋಪ ಹೊರಿಸಲು ಕಾರಣವೇನು ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, 'ಕಸಬ್ ಓರ್ವ ಪಾಕಿಸ್ತಾನಿ ಪ್ರಜೆ ಎಂದು ಟಿವಿ ತನ್ನ ವರದಿಯಲ್ಲಿ ಬಹಿರಂಗಪಡಿಸಿತ್ತು. ಚಾನೆಲ್ ವರದಿಗಾರರು ಕಸಬ್‌ನ ಗ್ರಾಮವಾದ ಫರೀದ್‌ಕೋಟ್‌ಗೆ ಹೋಗಿ ಆತನ ಕುಟುಂಬದ ಸದಸ್ಯರು ಮತ್ತು ಗೆಳೆಯರನ್ನು ಭೇಟಿ ಮಾಡಿ ವರದಿ ತಯಾರಿಸಿದ್ದರು' ಎಂದು ನಿಕ್ಕಂ ಉತ್ತರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ