ರಾಹುಲ್ ಗಾಂಧಿ ಸ್ಲೀಪರ್ ಕ್ಲಾಸ್ ಪ್ರಯಾಣಕ್ಕೆ ಬಿಜೆಪಿ ಲೇವಡಿ
ನವದೆಹಲಿ, ಶನಿವಾರ, 30 ಅಕ್ಟೋಬರ್ 2010( 15:27 IST )
'ಕೋವಿಧಾರಿ'ಗಳಂತೆ ವರ್ತಿಸುತ್ತಿರುವ ಸಂವಾದಕಾರರ ಕೈಯಲ್ಲಿ ಕಾಶ್ಮೀರದಂತಹ ಗಂಭೀರ ವಿಚಾರಗಳನ್ನು ಬಿಟ್ಟು ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ ಪ್ರಯಾಣ ಮಾಡುವ ವಿಚಾರಗಳಿಗೆ ಕಾಂಗ್ರೆಸ್ ಹೆಚ್ಚು ಮಹತ್ವ ಕೊಡುತ್ತಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ರೈಲು ಯಾನವನ್ನು ಬಿಜೆಪಿ ಲೇವಡಿ ಮಾಡಿದೆ.
ಸ್ಲೀಪರ್ ಕ್ಲಾಸಿನಲ್ಲಿ ಪ್ರಯಾಣ ಮಾಡಿರುವುದು ಮುಂತಾದ ಸಣ್ಣ, ಕ್ಷುಲ್ಲಕ ವಿಚಾರಗಳು ದೇಶದ ಕಳವಳಕ್ಕೆ ಕಾರಣವಾಗಿರುವ ಪ್ರಮುಖ ವಿಚಾರಗಳೆಂದು ಬಿಂಬಿಸಲಾಗುತ್ತಿದೆ. ದೇಶದ ಏಕತೆ ಮತ್ತು ಗೌರವದ ಜತೆ ಆಡವಾಡುತ್ತಿರುವ ಸರಕಾರಿ ಪ್ರತಿನಿಧಿಗಳ ಬಗ್ಗೆ ಅವರು ಯಾಕೆ ಕಾಶ್ಮೀರ ವಿಚಾರದ ಕುರಿತು ಸುಮ್ಮನಿದ್ದಾರೆ ಎಂದು ಬಿಜೆಪಿ ವಕ್ತಾರ ತರುಣ್ ವಿಜಯ್ ಪ್ರಶ್ನಿಸಿದರು.
ರಾಹುಲ್ ಗಾಂಧಿ ಇದೇ ತಿಂಗಳ ಆರಂಭದಲ್ಲಿ ಗೋರಖ್‌ಪುರದಿಂದ ಮುಂಬೈವರೆಗೆ ರೈಲಿನ ಸ್ಲೀಪರ್ ಕ್ಲಾಸ್ 36 ಗಂಟೆಗಳ ಪ್ರಯಾಣ ಮಾಡಿದ್ದರು. ಈ ವರದಿ ಬಹಿರಂಗಗೊಂಡದ್ದು ಕೆಲವೇ ದಿನಗಳ ಹಿಂದೆ.
ನಮ್ಮ ನಾಯಕರು ಎರಡನೇ ಮತ್ತು ಮೂರನೇ ದರ್ಜೆಗಳಲ್ಲೇ ಪ್ರಯಾಣಿಸುತ್ತಾರೆ. ಆದರೆ ತಾವು ಹಾಗೆ ಒಂದು ದಿನ ಮಾಡಿ ಭಾರೀ ಉಪಕಾರ ಮಾಡಿದ್ದೇವೆ, ತಾವೆಷ್ಟು ದೊಡ್ಡ ಮನಸ್ಸಿನವರು ಎಂದು ತೋರಿಸಿದ್ದೇವೆ ಎಂದು ಮೆರೆಸಲು ಅದನ್ನು ಯಾವತ್ತೂ ಸುದ್ದಿ ಮಾಡಿದವರಲ್ಲ. ಬಿಜೆಪಿಯ ಎಲ್ಲರೂ ದ್ವಿತೀಯ ಮತ್ತು ತೃತೀಯ ದರ್ಜೆ ಪ್ರಯಾಣಿಕರು ಎಂದರು.
ಸಂವಾದಕರು ಬಂದೂಕುದಾರಿಗಳಂತೆ ವರ್ತಿಸುತ್ತಿದ್ದರೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಏನೂ ಮಾಡುತ್ತಿಲ್ಲ ಎಂದೂ ಇದೇ ಸಂದರ್ಭದಲ್ಲಿ ವಿಜಯ್ ಆರೋಪಿಸಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ರಾಜಕೀಯ ಸಿಪಾಯಿಗಳಂತೆ ವರ್ತಿಸುತ್ತಿರುವ ಸೋ-ಕಾಲ್ಡ್ ಸಂವಾದಕರು ತಿರಂಗವನ್ನು ಅಪಹಾಸ್ಯ ಮಾಡುತ್ತಿದ್ದರೂ, ತಾಯ್ನೆಲದ ಏಕದೆ ಮತ್ತು ರಕ್ಷಣೆಯನ್ನು ಮಾಡುತ್ತಿರುವ ಸೇನಾಪಡೆಗಳಿಗೆ ಅಪಮಾನ ಮಾಡುತ್ತಿದ್ದರೂ ಯುಪಿಎ ಸರಕಾರ ಸುಮ್ಮನಿದೆ. ಸರಕಾರವು ಕಾಶ್ಮೀರದ ಜನತೆಯ ಭಾವನೆಗಳ ಜತೆ ಆಟವಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ವಿಜಯ್ ಆರೋಪಿಸಿದರು.
ಕಾಶ್ಮೀರದಲ್ಲಿ ದಿಲೀಪ್ ಪಡ್ಗಾಂವ್ಕರ್ ಮತ್ತು ರಾಧಾ ಕುಮಾರ್ ಅವರಿಂದ ದೇಶಪ್ರೇಮದ ಅಪಹಾಸ್ಯ ನಡೆಯುತ್ತಿದೆ. ಈ ವಿಚಾರಗಳ ಕುರಿತು ಗಮನ ಹರಿಸುವುದರ ಬದಲು ಕಾಂಗ್ರೆಸ್ ಸ್ಲೀಪರ್ ಕ್ಲಾಸ್ ಪ್ರಯಾಣದ ನಾಟಕ ಮಾಡುತ್ತಿದೆ. ಅವರಿಗೆ ಕಾಶ್ಮೀರ ವಿಚಾರಕ್ಕಿಂತ ಸ್ಲೀಪರ್ ಕ್ಲಾಸಿನಲ್ಲಿ ಪ್ರಯಾಣಿಸಿದ ವಿಚಾರವೇ ಮಹತ್ವವೆನಿಸಿದೆ ಎಂದು ಅಣಕಿಸಿದರು.