ಸೋಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿ ಇದೀಗ ಜಾಮೀನು ಪಡೆದಿರುವ ಗುಜರಾತ್‌ನ ಮಾಜಿ ಗೃಹ ಸಚಿವ, ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆಪ್ತರಾಗಿರುವ ಅಮಿತ್ ಶಾ ಅವರಿಗೆ, ತಕ್ಷಣವೇ ಗುಜರಾತ್‌ನಿಂದ ಹೊರ ಹೋಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮಾಜಿ ಗೃಹ ಸಚಿವ ಅಮಿತ್ ಶಾ ಅವರು ಸೋಹ್ರಾಬುದ್ದೀನ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಸಿಬಿಐ ಕಳೆದ ಜುಲೈ 25ರಂದು ಬಂಧಿಸಿದ್ದು, ಹೈಕೋರ್ಟ್, ಅಮಿತ್ ಶಾ ಅವರಿಗೆ 1 ಲಕ್ಷ ರೂಪಾಯಿ ಠೇವಣಿಯ ವೈಯಕ್ತಿಕ ಬಾಂಡ್ ಪಡೆದು ಶುಕ್ರವಾರ ಜಾಮೀನು ಮಂಜೂರು ಮಾಡಿತ್ತು.
ಅಮಿತ್ ಶಾ ಜಾಮೀನನ್ನು ನ್ಯಾಯಾಲಯವು ರದ್ದುಗೊಳಿಸದಿದ್ದಲ್ಲಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಸಿಬಿಐ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ನ್ಯಾಯಾಧೀಶರು ಗುಜರಾತ್ ರಾಜ್ಯವನ್ನು ಪ್ರವೇಶಿಸದಂತೆ ಅಮಿತ್ ಶಾ ಅವರಿಗೆ ಎಚ್ಚರಿಕೆ ನೀಡಿದೆ.
ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಅಫ್ತಾಬ್ ಆಲಂ ಮತ್ತು ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರನ್ನೊಳಗೊಂಡ ನ್ಯಾಯಪೀಠವು ಶನಿವಾರ ಈ ಆದೇಶ ನೀಡಿದ್ದು, ಮುಂದಿನ ವಿಚಾರಣೆಯ ವೇಳೆಯವರೆಗೆ (ನವೆಂಬರ್ 15ರವರೆಗೆ) ಗುಜರಾತ್ ರಾಜ್ಯದ ವ್ಯಾಪ್ತಿಯಿಂದ ದೂರವಿರುವಂತೆ ಆದೇಶ ನೀಡಿದ್ದಾರೆ.
ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು, ಅಮಿತ್ ಶಾ ಅವರಿಗೆ ನವೆಂಬರ್ 10ರ ವರೆಗೆ ಕಾಲವಕಾಶ ನೀಡಲಾಗಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ಸಿಬಿಐ ವಾದವನ್ನು ತಳ್ಳಿಹಾಕಿದ ಅಮಿತ್ ಶಾ ಪರ ವಕೀಲ ಭೂಪಿಂದರ್ ಯಾದವ್, ಅಮಿತ್ ಶಾ ಅವರಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಖಚಿತವಾದ ಆಧಾರಗಳಿಲ್ಲದೆ ಅವರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ಸೂಕ್ತವಲ್ಲ ಎಂದು ವಾದಿಸಿದ್ದರು.