ಅವಳಿಗಿನ್ನೂ ಆರರ ಎಳೆ ವಯಸ್ಸು. ಆದರೆ ಸಾಧುಗಳು, ಗೃಹಿಣಿಯರು ಮತ್ತು ಹಿರಿಯರಿಗೆಲ್ಲರಿಗೂ ಆಕೆ ಗುರು! ಇವಳೇ ಶ್ರುತಿ ಪಾಂಡೆ. ಉತ್ತರ ಪ್ರದೇಶದ ಅಲಾಹಾಬಾದ್ ಜಿಲ್ಲೆಯ ಪುಟಾಣಿ ಯೋಗ ಗುರು!
ಸೆಂಟ್ರಲ್ ಅಕಾಡೆಮಿಯ 2ನೇ ತರಗತಿ ವಿದ್ಯಾರ್ಥಿನಿ ಶ್ರುತಿ, ಪ್ರತಿ ದಿನ ಬೆಳಿಗ್ಗೆ ಜೂನ್ಸಿ ಪಟ್ಟಣದ ಸ್ವಾಮಿ ಬ್ರಹ್ಮಾನಂದ ಸರಸ್ವತಿ ಕೈವಲ್ಯ ಧಾಮದಲ್ಲಿ ವಿಭಿನ್ನ ವಯೋಮಿತಿಯ 60 ಮಂದಿಗೆ ಯೋಗಾಭ್ಯಾಸ ಹೇಳಿಕೊಡುತ್ತಾಳೆ.
ಯೋಗ ತರಗತಿಯ ಸಮಯ ಪಾಲನೆ ಬಗ್ಗೆ ಆಕೆಗೆ ಪಕ್ಕಾ ನಿಷ್ಠೆ. ದಿನಂಪ್ರತಿ ಬೆಳ್ಳಂಬೆಳಗ್ಗೆ 5.30ಕ್ಕೆ ಯೋಗ ತರಗತಿ ಆರಂಭಿಸುವ ಆಕೆ, ಒಂದು ಗಂಟೆ ಕಾಲ ದೈಹಿಕ ಅಭ್ಯಾಸ ಬೋಧಿಸುತ್ತಾಳೆ ಎಂದಿದ್ದಾರೆ ಶ್ರುತಿಯ ಗುರುವೂ ಆಗಿರುವ ಕೈವಲ್ಯ ಧಾಮದ ಮುಖ್ಯಸ್ಥ ಹರಿ ಚೇತನ್ ಮಹಾರಾಜ್.
ಯಾವುದೇ ವೃತ್ತಿಪರ ಯೋಗ ಶಿಕ್ಷಕರಂತೆ ಆಸನಗಳನ್ನು ಮಾಡಿತೋರಿಸಬಲ್ಲ ಚಾಣಾಕ್ಷೆ ಆಕೆ. ನಾಲ್ಕು ವರ್ಷದವಳಿದ್ದಾಗಲೇ ಯೋಗ ಕಲಿಯತೊಡಗಿದ್ದಳು. ಈ ಕೈವಲ್ಯ ಧಾಮವನ್ನು 35 ವರ್ಷಗಳ ಹಿಂದೆ ಸ್ಥಾಪಿಸಿದ್ದು ಆಕೆಯ ತಾತ ದ್ವಿಜ ರಾಜ್ ಪಾಠಕ್ ಅವರು. ಶ್ರುತಿಯ ತಂದೆ ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಣ ಪರಿಷತ್‌ನ ಅಧಿಕಾರಿ ಮತ್ತು ತಾಯಿ ಗೃಹಿಣಿ.
ಮನೆಯಲ್ಲಿ ಅಣ್ಣ ಯೋಗಾಭ್ಯಾಸ ಮಾಡುತ್ತಿದ್ದುದನ್ನು ನೋಡಿಯೇ ಅದರತ್ತ ಆಕರ್ಷಿತಳಾಗಿದ್ದಳು ಶ್ರುತಿ. ಆಕೆಯ ಕಲಿಕೆಯ ವೇಗ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡಹಿದೆ. ತನ್ನ ವಯಸ್ಸಿನ ಬೇರೆ ಮಕ್ಕಳಿಗಿಂತ ಶೀಘ್ರವಾಗಿ ಹೇಳಿಕೊಟ್ಟದ್ದನ್ನು ತಕ್ಷಣವೇ ಅರಿತುಕೊಂಡು ಅನುಸರಿಸುವ ಕಲೆ ಅವಳಿಗೆ ಒಲಿದಿದೆ. ಕಠಿಣ ಆಸನಗಳನ್ನೂ ಲೀಲಾಜಾಲವಾಗಿ ಮಾಡಿತೋರಿಸುತ್ತಾಳೆ ಎನ್ನುತ್ತಾರೆ ಮಹಾರಾಜ್.
ಈ ಪುಟಾಣಿಯ ವಿದ್ಯಾರ್ಥಿಗಳಲ್ಲಿ, ಸಾಧುಗಳು, ಸಂತರು, ಉದ್ಯಮಿಗಳು, ಶಿಕ್ಷಕರು ಮುಂತಾಗಿ ಎಲ್ಲ ವರ್ಗದವರೂ ಇದ್ದಾರೆ! ಈ ಆಶ್ರಮದಲ್ಲಿ ಯೋಗಾಭ್ಯಾಸಕ್ಕೆ ಬರುವ ಯಾರಿಗೇ ಆದರೂ ಕೈವಲ್ಯ ಧಾಮವು ಯಾವುದೇ ಶುಲ್ಕ ವಿಧಿಸುವುದಿಲ್ಲ.