ಆದರ್ಶ ಹೌಸಿಂಗ್ ಸೊಸೈಟಿ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಒಂದೊಂದೇ ಕಾಂಗ್ರೆಸ್, ಎನ್‌ಸಿಪಿ ಮುಖಂಡರ ಮುಖವಾಡ ಬಯಲಿಗೆ ಬರುತ್ತಿದೆ. ಇದೀಗ ರಾಜ್ಯದ ನಾಲ್ವರು ಮಾಜಿ ಮುಖ್ಯಮಂತ್ರಿಗಳಾದ ವಿಲಾಸ್‌ರಾವ್ ದೇಶಮುಖ್, ಸುಶೀಲ್ ಕುಮಾರ್ ಶಿಂಧೆ, ನಾರಾಯಣ ರಾಣೆ ಮತ್ತು ಶಿವಾಜಿ ರಾವ್ ಪಾಟೀಲ್ ನಿಲಂಗೇಕರ್ ಅವರ ಹೆಸರುಗಳು ಕೇಳಿಬರುತ್ತಿದೆ.
ವಿವಾದಿತ ಯೋಜನೆಗೆ ನಾಲ್ವರೂ ಮಾಜಿ ಮುಖ್ಯಮಂತ್ರಿಗಳು ವಿವಿಧ ಹಂತದಲ್ಲಿ ಅನುಮತಿ ನೀಡಿರುವ ಅಂಶ ಬೆಳಕಿಗೆ ಬಂದಿದೆ. 1999ರಿಂದ 2003ರವರೆಗೆ ಮುಖ್ಯಮಂತ್ರಿಯಾಗಿದ್ದು, ಈಗ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾಗಿರುವ ವಿಲಾಸ್ ರಾವ್ ದೇಶಮುಖ್ ಅವರ ಮೂವರು ನಿಕಟವರ್ತಿಗಳಾದ ಅಮೋಲ್ ಖರ್‌ಭಾರಿ, ಕಿರಣ್ ಭಾಂಡಗೆ ಹಾಗೂ ಉತ್ತಮ್ ಘಕರೆ ಅವರು ಸೊಸೈಟಿಯ ಪಟ್ಟಿಯಲ್ಲಿದ್ದಾರೆ. ಅವರಿಗೆ ಫ್ಲ್ಯಾಟ್ ನೀಡುವಂತೆ ವಿಲಾಸ್ ರಾವ್ ಶಿಫಾರಸು ಮಾಡಿದ್ದರು!
ಆದರೆ ತಾನು ಯಾರಿಗೂ ಫ್ಲ್ಯಾಟ್ ನೀಡುವಂತೆ ಶಿಫಾರಸು ಮಾಡಿಲ್ಲ ಎಂದು ದೇಶಮುಖ್ ಸ್ಪಷ್ಟನೆ ನೀಡಿದ್ದಾರೆ. 2003ರಿಂದ 2004ರ ನವೆಂಬರ್‌ವರೆಗೆ ಮುಖ್ಯಮಂತ್ರಿಯಾಗಿದ್ದ ಕೇಂದ್ರ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಯೋಜನೆಗೆ ಅಂತಿಮ ಒಪ್ಪಿಗೆ ನೀಡಿದ್ದು, ಮೂರು ಕೊಠಡಿಗಳ ಫ್ಲ್ಯಾಟ್ ಅನ್ನು ಮೇಜರ್ ಎನ್.ಡಬ್ಲ್ಯು.ಖಾನ್‌ಖೋಜೆ ಎನ್ನುವವರ ಹೆಸರಿನಲ್ಲಿ ಹೊಂದಿದ್ದಾರೆ.
ರಾಜ್ಯ ಕಂದಾಯ ಸಚಿವ ರಾಣೆ ಅವರ ಇಬ್ಬರು ನಿಕಟವರ್ತಿಗಳಾದ ರೂಪಾಲಿ ರಾವ್ ರಾಣೆ ಮತ್ತು ಗಿರೀಶ್ ಪ್ರವೀಣ್ ಚಂದ್ರ ಮೆಹ್ತಾ ಅವರ ಹೆಸರೂ ಕೇಳಿ ಬಂದಿದೆ. ರಾಣೆ 1999ರಲ್ಲಿ ಒಂಬತ್ತು ತಿಂಗಳ ಕಾಲ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಹಗರಣ ನಡೆದಿದೆ. ಅವರು ಆದರ್ಶ ಯೋಜನೆಗೆ ಆರಂಭಿಕ ಅನುಮತಿ ನೀಡಿದ್ದರು. ಏತನ್ಮಧ್ಯೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಮಾಜಿ ಕಂದಾಯ ಸಚಿವ ಶಿವಾಜ್ ರಾವ್ ಪಾಟೀಲ್ ನಿಲಂಗೇಕರ್ ಅವರ ನಿಕಟವರ್ತಿಗಳಾದ ಅರುಣ್ ದಲೈ ಮತ್ತು ಸಂಪತ್ ಖಿಡ್ಸೆ ಅವರಿಗೂ ಫ್ಲ್ಯಾಟ್ ನೀಡಲಾಗಿದೆ. 2004ರಲ್ಲಿ ಕಂದಾಯ ನಿಲಂಗೇಕರ್ ಸಚಿವರಾಗಿದ್ದಾರೆ. ಮಾಜಿ ಕಂದಾಯ ಸಚಿವ ಶಿವಾಜಿ ರಾವ್ ಪಾಟೀಲ್ ನಿಲಂಗೇಕರ್ ಅವರ ನಿಕಟವರ್ತಿಗಳಾದ ಅರುಣ್ ದಲ್ವೆ ಮತ್ತು ಸಂಪತ್ ಖಿಡ್ಸೆ ಅವರಿಗೂ ಫ್ಲ್ಯಾಟ್ ನೀಡಲಾಗಿದೆ. ಅಲ್ಲದೇ 1986ರಲ್ಲಿ ನಿಲಂಗೇಕರ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.
ಅಷ್ಟೇ ಅಲ್ಲ ರಾಜ್ಯದ ಪ್ರಭಾವಿ ರಾಜಕಾರಣಿಗಳಾದ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಸಹೋದರ ಸಂಬಂಧಿ ಎನ್‌ಸಿಪಿ ಮುಖಂಡ ಅಜಿತ್ ಪವಾರ್, ಜಯಂತ್ ಪಾಟೀಲ್ ಮತ್ತು ಅನಿಲ್ ದೇಶಮುಖ್ ಅವರ ಹೆಸರೂ ಕೂಡ ದಟ್ಟವಾಗಿ ಕೇಳಿಬರುತ್ತಿದೆ.
ಅಜಿತ್ ಪವಾರ್ ಅವರ ನಿಕಟವರ್ತಿಗಳಾದ ಕೃಷ್ಣರಾವ್ ಭಾಗ್ಡೆ ಮತ್ತು ಶಿವಾಜಿ ರಾವ್ ಕಾಳೆ. ರಾಜ್ಯದ ಗೃಹ ಸಚಿವ ಆರ್.ಆರ್.ಪಾಟೀಲ್ ಅವರ ನಿಕಟವರ್ತಿ ಚಂದ್ರಶೇಖರ ಗಾಯಕವಾಡ್, ಗ್ರಾಮೀಣಾಭಿವೃದ್ಧಿ ಸಚಿವ ಜಯಂತ್ ಪಾಟೀಲ್ ಅವರ ಸಂಬಂಧಿ ಆದಿತ್ಯ ಪಾಟೀಲ್, ಆಹಾರ ಸಚಿವ ಅನಿಲ್ ದೇಶ್‌ಮುಖ್ ನಿಕಟವರ್ತಿ ಮುಕುಂದರಾವ್ ಮಾನ್‌ಕರ್ ಮತ್ತು ಅರಣ್ಯ ಸಚಿವ ಪತಂಗರಾವ್ ಕದಂ ಅವರ ನಿಕಟವರ್ತಿ ಬಾಳಾ ಸಾಹಿಬ್ ಸಾವಂತ್ ಅವರಿಗೂ ಫ್ಲ್ಯಾಟ್‌ಗಳನ್ನು ವಿತರಿಸಲಾಗಿದೆ ಎಂದು ದೂರಲಾಗಿದೆ.
ಕಾರ್ಗಿಲ್ ಯುದ್ಧದಲ್ಲಿ ಮಡಿದವರು ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಕುಟುಂಬಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿತ್ತು. ಇದನ್ನು 2000ನೇ ಇಸವಿಯಲ್ಲಿ ಅಶೋಕ್ ಚವಾಣ್ ಅವರು ಅನುಮೋದಿಸಿದ್ದರು.
ಹಗರಣದ ವರದಿಗೆ ಮತ್ತಷ್ಟು ಸಮಯ ಬೇಕು-ಮುಖರ್ಜಿ: ಆದರ್ಶ ಹೌಸಿಂಗ್ ಸೊಸೈಟಿ ಹಗರಣ ಪ್ರಕರಣದ ತನಿಖೆಯ ಜವಾಬ್ದಾರಿ ಕಾಂಗ್ರೆಸ್ ಹಿರಿಯ ಮುಖಂಡರಾದ ವಿತ್ತ ಸಚಿವ ಪ್ರಣಬ್ ಮುಖರ್ಜಿ ಹಾಗೂ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರ ಹೆಗಲಿಗೆ ಬಿದ್ದಿದೆ. ಅಲ್ಲದೇ ಹಗರಣದ ಕುರಿತು ದಾಖಲೆಗಳ ಪರಿಶೀಲನೆಗೆ ಮತ್ತಷ್ಟು ಸಮಯ ಬೇಕಾಗಿದ್ದು, ಅವುಗಳನ್ನು ಪರಿಶೀಲಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಮುಖರ್ಜಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.