ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತಗಟ್ಟೆಯಲ್ಲಿ ಲಾಲೂ, ರಾಬ್ರಿ ಕಿರಿಕ್; ಎಫ್ಐಆರ್ ದಾಖಲು (Lalu Prasad | Rabri Devi | violating | Bihar assembly polls)
Bookmark and Share Feedback Print
 
PTI
ಬಿಹಾರದ 42 ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಾಲ್ಕನೇ ಹಂತದ ಮತದಾನ ಬಿರುಸಿನಿಂದ ಆರಂಭಗೊಂಡಿದ್ದರೆ, ಮತ್ತೊಂದೆಡೆ ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ ರಾಬ್ರಿ ದೇವಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಡಿಘಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಳಗೆ ತಮ್ಮ ಅಂಗರಕ್ಷಕರನ್ನು ಕರೆತಂದ ವಿರುದ್ಧ ಚುನಾವಣಾ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.

ಚುನಾವಣಾ ನೀತಿ ಸಂಹಿತೆಯನ್ನು ಧಿಕ್ಕರಿಸಿ ತಮ್ಮ ಅಂಗರಕ್ಷಕರೊಡನೆಯೇ ಮತಗಟ್ಟೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ವಿರುದ್ಧ ಪಾಟ್ನಾ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಡಿಘಾ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ಅಶೋಕ್ ಕುಮಾರ್ ಅವರು ದೂರು ದಾಖಲಿಸಿದ್ದಾರೆ.

ಮತದಾನ ನಡೆಯುವ ಸಂದರ್ಭದಲ್ಲಿ ಮತಗಟ್ಟೆಯಿಂದ ನೂರು ಮೀಟರ್ ಒಳಗೆ ಯಾವುದೇ ವಿಐಪಿ ಅಥವಾ ಗಣ್ಯರು ತಮ್ಮ ಅಂಗರಕ್ಷಕರು, ಕಮಾಂಡೋಗಳ ಜತೆ ಬೂತ್ ಪ್ರವೇಶಿಸಿ ಮತದಾನ ಮಾಡುವಂತಿಲ್ಲ ಎಂದು ಡಿಘಾ ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಆಫೀಸರ್ ಮಕ್‌ಸೂದ್ ಅಲಾಮ್ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಮತದಾನ ಆರಂಭಗೊಂಡ ಸಂದರ್ಭದಲ್ಲಿ ಲಾಲೂ ಪ್ರಸಾದ್, ಪತ್ನಿ ರಾಬ್ರಿ ದೇವಿ ಹಾಗೂ ಪುತ್ರ ತೇಜ್ ಪ್ರತಾಪ್, ಪುತ್ರಿ ರಾಗಿಣಿ ಸೇರಿದಂತೆ ತಮ್ಮ ಅಂಗರಕ್ಷಕರ ಜೊತೆಯೇ ಮತಗಟ್ಟೆ ಪ್ರವೇಶಿಸಿ ಮತದಾನ ಮಾಡಿದ್ದರು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು ಕೂಡ ಲಾಲೂ ಅದನ್ನು ಲೆಕ್ಕಿಸದೆ, ಮತದಾನ ಮಾಡಿರುವುದಾಗಿ ಚುನಾವಣಾ ಅಧಿಕಾರಿಗಳು ದೂರಿದ್ದಾರೆ.

ಮತ್ತೆ ಮಾವೋ ಅಟ್ಟಹಾಸ:ಬಿಹಾರದ 42 ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಶೇ.14ರಷ್ಟು ಮತದಾನವಾಗಿದೆ. ಏತನ್ಮಧ್ಯೆ ಬೆಟಿಯ ಅರಣ್ಯ ಪ್ರದೇಶ ಮತ್ತು ದಾನಾಪುರ್ ಪ್ರದೇಶದಲ್ಲಿ ಮಾವೋವಾದಿಗಳು ಬಾಂಬ್ ಸ್ಫೋಟಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ನೀಲಮಣಿ ಹೇಳಿದ್ದಾರೆ.

ಮತ್ತೊಂದು ಘಟನೆಯಲ್ಲಿ ದಾನಾಪುರ್ ಮತಗಟ್ಟೆಯ ಸಮೀಪ ಅಪರಿಚಿತ ವ್ಯಕ್ತಿಗಳು ನಾಲ್ಕು ಬಾಂಬ್‌ಗಳನ್ನು ಎಸೆದು ಪರಾರಿಯಾಗಿದ್ದು, ಈ ಘಟನೆಯಲ್ಲೂ ಯಾರಿಗೂ ಯಾವ ಹಾನಿಯೂ ಆಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ