ಸಮೀಪದ ಆವಡಿ ಎಂಬಲ್ಲಿರುವ ಮೇಲ್ಸೇತುವೆಯಿಂದ ಸಾವಿರ ರೂಪಾಯಿಗಳ ನೋಟುಗಳ ಸುರಿಮಳೆಯಾಗಿ, ಅದನ್ನು ಹೆಕ್ಕಿಕೊಳ್ಳಲು ಜನರು ಮುಗಿಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಆದ ಘಟನೆ ಭಾನುವಾರ ಮಧ್ಯಾಹ್ನ ಚೆನ್ನೈಯಲ್ಲಿ ನಡೆದಿದೆ.
ಆಕಾಶದಿಂದ ಸುರಿಯುವಂತಿದ್ದ ಒಂದು ಸಾವಿರ ರೂಪಾಯಿ ನೋಟುಗಳನ್ನು ಸಿಕ್ಕಿದಷ್ಟು ಬಾಚಿಕೊಳ್ಳಲು ಮೇಲ್ಸೇತುವೆಯ ಕೆಳಗೆ ಜನರು ಒಟ್ಟು ಸೇರಿದಾಗ ಕೆಳಗಿನ ಸಿಗ್ನಲ್ ಸಮೀಪ ಸಂಚಾರ ವ್ಯವಸ್ಥೆಯೇ ಏರುಪೇರಾಯಿತು. ಅದು ನ್ಯೂ ಮಿಲಿಟರಿ ರೋಡ್ ಮತ್ತು ಚೆನ್ನೈ-ತಿರುಪತಿ ಹೆದ್ದಾರಿಗಳು ಸಂಗಮವಾಗುವ ಸ್ಥಳ.
ಪೊಲೀಸರು ಬಂದಾಗ ಸಿಕ್ಕಿದವರು ಹೆಕ್ಕಿಕೊಂಡು ಅದಾಗಲೇ ಪರಾರಿಯಾಗಿದ್ದರೆ, ಮತ್ತೆ ಕೆಲವರಿಂದ ಪೊಲೀಸರು ಹಣವನ್ನು ವಶಪಡಿಸಿಕೊಂಡರು. ಒಟ್ಟು 33 ನೋಟುಗಳು ಸಿಕ್ಕಿದವು.
ಯಾರೋ ಬೈಕಿನಲ್ಲಿ ಹೋಗುತ್ತಿದ್ದಾಗ, ಹಣವನ್ನು ಚೀಲದಲ್ಲಿ ಹಾಕಿಕೊಂಡು ಹೋಗುತ್ತಿದ್ದಿರಬೇಕು, ಅದು ಗಾಳಿಗೆ ಹಾರಿ ಉದುರಿರಬಹುದು ಎಂಬುದು ಪೊಲೀಸರ ಆರಂಭಿಕ ಶಂಕೆ. ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಈ ಹಣದ ಮಳೆ ಸುರಿಸಿರಬಹುದು ಎಂಬುದು ಕೆಲವು ಸ್ಥಳೀಯರ ಸಂದೇಹ.
ಹಣ ಕಳೆದುಕೊಂಡವರು ಪೊಲೀಸ್ ಠಾಣೆ ಸಂಪರ್ಕಿಸಬಹುದು ಎಂದಿದ್ದಾರೆ ಆವಡಿ ಠಾಣಾ ಪೊಲೀಸರು.
ಕಳೆದ ಆಗಸ್ಟ್ ತಿಂಗಳಲ್ಲಿಯೂ ಸಮೀಪದ ವ್ಯಾಸರಪಾಡಿ ನೀರಿನ ಪೈಪಿನಲ್ಲಿ 50 ಮತ್ತು 100 ರೂ. ಮುಖಬೆಲೆಯ ನೋಟುಗಳ 'ಪ್ರವಾಹ' ಬಂದಿತ್ತು! ನೀರಿನ ಪೈಪ್‌ಲೈನಿಗೆ ಲಾರಿ ಬಡಿದ ಪರಿಣಾಮ ಅದು ಒಡೆದು ಹಣದ ಹೊಳೆ ಹರಿದಿತ್ತು. ಅಂದು ಕೂಡ ಟ್ರಾಫಿಕ್ ಜಾಮ್ ಆಗಿತ್ತು.