ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಭಿವೃದ್ಧಿಯಲ್ಲಿ 10 ಸ್ಥಾನ ಕುಸಿದ ಭಾರತ (India | Global Prosperity Index | Aam Admi | Economy)
Bookmark and Share Feedback Print
 
'ಆಮ್ ಆದ್ಮೀ' ರಕ್ಷಣೆಗೆ ಪಣ ತೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಆಳ್ವಿಕೆಯಡಿ, ಕಳೆದೆರಡು ವರ್ಷಗಳಿಂದ ಬೆಲೆ ಏರಿಕೆಯೆಂಬ ಭೂತ ಜನರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ತತ್ಪರಿಣಾಮವೋ ಎಂಬಂತೆ, ಜಾಗತಿಕ ಅಭಿವೃದ್ಧಿಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತವು ಕಳೆದ ವರ್ಷಕ್ಕಿಂತ 10 ಸ್ಥಾನ ಕುಸಿದಿದೆ.

ಕಳಪೆಯಾದ ಆರೋಗ್ಯ ರಕ್ಷಣಾ ಸೌಕರ್ಯಗಳು ಹಾಗೂ ಶಿಕ್ಷಣ ವ್ಯವಸ್ಥೆಗಳೊಂದಿಗೆ ಔದ್ಯಮಿಕ ಮೂಲಸೌಕರ್ಯಗಳ ಕೊರತೆಯ ದೌರ್ಬಲ್ಯವೂ ಭಾರತದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಚೀನಾಕ್ಕಿಂತಲೂ ಹಿಂದೆ ಬಿದ್ದು, ಕಳೆದ ವರ್ಷದ 78ನೇ ಸ್ಥಾನಕ್ಕಿಂತ ಈ ಬಾರಿ 88ಕ್ಕೆ ಕುಸಿದಿದೆ. ಲಂಡನ್ ಮೂಲದ ಲೆಗಾಟಮ್ ಇನ್‌ಸ್ಟಿಟ್ಯೂಟ್ ಈ ಸೂಚ್ಯಂಕವನ್ನು ಕಲೆ ಹಾಕಿದೆ.

ಒಟ್ಟು 110 ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ 58ನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವುದು ನಾರ್ವೇ. ಟಾಪ್ 5 ಸ್ಥಾನದಲ್ಲಿರುವ ಇತರ ರಾಷ್ಟ್ರಗಳೆಂದರೆ ಡೆನ್ಮಾರ್ಕ್, ಫಿನ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ (ಅನುಕ್ರಮವಾಗಿ 2ರಿಂದ 5). ಆರ್ಥಿಕ ಪ್ರಗತಿ, ಜನರ ಜೀವನ ಮಟ್ಟ ಮುಂತಾದ 89 ಅಂಶಗಳನ್ನು ಪರಿಗಣಿಸಿ ಈ ಶ್ರೇಯಾಂಕ ನಿರ್ಧರಿಸಲಾಗುತ್ತದೆ. ಜೀವನಮಟ್ಟವೂ ಇಲ್ಲಿ ಪರಿಗಣನೆಗೆ ಬಂದಿರುವುದರಿಂದ ಜನ ಸಾಮಾನ್ಯರು ಅನುಭವಿಸುತ್ತಿರುವ ಬೆಲೆ ಏರಿಕೆಯೂ ಇದಕ್ಕೆ ತನ್ನ 'ಕೊಡುಗೆ' ಸಲ್ಲಿಸಿದೆ. ಇದಕ್ಕೆ 2009ರ ಗ್ಯಾಲಪ್ ಜಾಗತಿಕ ಸಮೀಕ್ಷೆ ಹಾಗೂ ವಿಶ್ವಸಂಸ್ಥೆಯ ಪ್ರಗತಿ ವರದಿಯನ್ನೂ ಪರಿಗಣಿಸಲಾಗಿದೆ.

ಸೂಚ್ಯಂಕಗಳಲ್ಲಿ ಶಿಕ್ಷಣದಲ್ಲಿ 89ನೇ ಸ್ಥಾನ, ಆರೋಗ್ಯದಲ್ಲಿ 95ನೇ ಸ್ಥಾನ, ಔದ್ಯಮಿಕತೆ ಮತ್ತು ಅವಕಾಶಗಳ ಕ್ಷೇತ್ರದಲ್ಲಿ 93 ಹಾಗೂ ಸಾಮಾಜಿಕ ಹೂಡಿಕೆ ಕ್ಷೇತ್ರದಲ್ಲಿ 105ನೇ ಸ್ಥಾನದಲ್ಲಿದೆ ಭಾರತ.

ಅತ್ಯಂತ ಕಳಪೆ ಆರೋಗ್ಯ ಕ್ಷೇತ್ರವನ್ನು ಹೊಂದಿರುವ ಭಾರತವು ರೋಗ ರುಜಿನಗಳು ಅಥವಾ ಅಪೌಷ್ಟಿಕತೆ ತಡೆಯಲು ವಿಫಲವಾಗಿದೆ, ದುರ್ಬಲ ಔದ್ಯಮಿಕ ಮೂಲಸೌಲಭ್ಯಗಳು, ಅಭಿವೃದ್ಧಿ ಕಾಣದ ಶಿಕ್ಷಣ ವ್ಯವಸ್ಥೆ ಹಾಗೂ ಸಾಮಾಜಿಕ ಬಂಡವಾಳದ ವಿಪರೀತ ಕುಸಿತವಿದೆ ಎಂಬುದನ್ನು ಈ ಅಭಿವೃದ್ಧಿ ಸೂಚ್ಯಂಕ ಸೂಚಿಸುತ್ತದೆ ಎಂದು ಲೆಗಾಟಮ್ ವರದಿ ತಿಳಿಸಿದೆ. ಇದರೊಂದಿಗೆ, ಭಾರತಕ್ಕೆ ಇವೆಲ್ಲವುಗಳಿಗಿಂತ ಹೆಚ್ಚು ಶ್ರೇಯಾಂಕ ದೊರೆತದ್ದು ಆರ್ಥಿಕತೆ (44) ಮತ್ತು ಆಡಳಿತ (41ನೇ) ಕ್ಷೇತ್ರಗಳಲ್ಲಿ. ಇದಕ್ಕೆ ಪ್ರಮುಖ ಕಾರಣವಾಗಿದ್ದೆಂದರೆ ದೇಶದ ಜನತೆಯಲ್ಲಿ ಸರಕಾರ ಮತ್ತು ದೇಶದ ಹಣಕಾಸು ಸಂಸ್ಥೆಗಳ ಮೇಲಿರುವ ವಿಶ್ವಾಸ ಎಂದಿದೆ ವರದಿ.

ಜಾಗತಿಕ ಸೂಚ್ಯಂಕದಲ್ಲಿ ಚೀನಾವು ಭಾರತಕ್ಕಿಂತ 30 ಸ್ಥಾನ ಮೇಲೆ ಇದೆ.

ಲೆಗಾಟಮ್ ಪ್ರಾಸ್ಪರಿಟಿ ಇಂಡೆಕ್ಸ್ ಎಂಬುದು ಜಾಗತಿಕವಾಗಿ ಶ್ರೀಮಂತಿಕೆ ಮತ್ತು ಜೀವನಮಟ್ಟವನ್ನು ಅಳೆಯುವ ವಿಶ್ವದ ಏಕೈಕ ಸಂಸ್ಥೆ. ಏಳಿಗೆಗೆ ಬೇಕಾಗಿರುವ ಎಲ್ಲ ಸ್ತರಗಳನ್ನೂ ಸಮಗ್ರವಾಗಿ ವಿಶ್ಲೇಷಿಸುವುದರಿಂದ ವಿಶ್ವಾಸಾರ್ಹ ವರದಿಯನ್ನೇ ನೀಡುತ್ತಿದೆ ಎನ್ನುತ್ತಾರೆ ಸಂಸ್ಥೆಯ ಸೀನಿಯರ್ ಫೆಲೋ ಆಶ್ಲೆ ಲೆನಿಹಾನ್.

ಇದೇ ವೇಳೆ, ಶ್ರೇಯಾಂಕ ಪಟ್ಟಿಯಲ್ಲಿ ಕೆಳಗಿನ ಸ್ಥಾನಗಳಲ್ಲಿ ಜಿಂಬಾಬ್ವೆ (110), ಪಾಕಿಸ್ತಾನ (109), ಕೇಂದ್ರೀಯ ಆಫ್ರಿಕಾ ಗಣರಾಜ್ಯ (108), ಇಥಿಯೋಪಿಯಾ (107) ಹಾಗೂ ನೈಜೀರಿಯಾ (106) ಇವೆ.

ಈ ಸೂಚ್ಯಂಕದ ಹಿಂದಿರುವ ಉದ್ದೇಶವೆಂದರೆ, ಸುಖೀ ಸಮಾಜವನ್ನು ಭೌತಿಕ ಸಂಪತ್ತು ಮಾತ್ರವೇ ಸೃಷ್ಟಿಸುವುದಿಲ್ಲ. ಜನರ ಜೀವನ ಮಟ್ಟ ಸುಧಾರಿಸಿ ಅವರು ಸಂತಸದಿಂದಿದ್ದರೆ ಆರ್ಥಿಕತೆಯೂ ಬೆಳೆಯುತ್ತದೆ ಎಂಬುದನ್ನು ತೋರಿಸುವುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ