ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಪ್ರಧಾನಿ ಆಗೋ ಮೊದ್ಲು ಸಿಎಂ ಆಗ್ಲಿ: ನಿತೀಶ್ ಕಿಡಿ (Rahul Gandhi | Nitish Kumar | CM first | Congress | prime minister)
ರಾಜ್ಯದ ಅಭಿವೃದ್ಧಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಯು ಮುಖಂಡ ನಿತೀಶ್ ಕುಮಾರ್, ರಾಹುಲ್ ಪ್ರಧಾನಿ ಹುದ್ದೆ ಆಕಾಂಕ್ಷಿಯಾಗುವ ಮೊದಲು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿ ಎಂದು ತಿರುಗೇಟು ನೀಡಿದ್ದಾರೆ.
ಬಿಹಾರದ ಅಭಿವೃದ್ಧಿ ಬಗ್ಗೆ ಉಪನ್ಯಾಸ ನೀಡುವ ರಾಹುಲ್ ಗಾಂಧಿಗೆ ನಾನೊಂದು 'ಸಿಂಪಲ್' ಸಲಹೆ ನೀಡುತ್ತೇನೆ. ಏನೆಂದರೆ ರಾಹುಲ್ ಗಾಂಧಿ ಮೊದಲು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಆಡಳಿತ ನಡೆಸುವುದು ಹೇಗೆ ಎಂದು ಕಲಿತುಕೊಳ್ಳಲಿ. ನಂತರ ಪ್ರಧಾನಿಗಾದಿ ಕನಸು ಕಾಣಲಿ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ನಾಲ್ಕನೆ ಹಂತದ ವಿಧಾನಸಭಾ ಕ್ಷೇತ್ರದ ಮತದಾನದ ಹಿನ್ನೆಲೆಯಲ್ಲಿ ಸೋಮವಾರ ತಮ್ಮ ಹುಟ್ಟೂರಿಗೆ ಆಗಮಿಸಿ ಮತದಾನ ಮಾಡಿದ ನಂತರ ನಿತೀಶ್ ಸುದ್ದಿಗಾರರೊಂದಿಗೆ ಮಾತನಾಡಿದರು.
'ಬಿಹಾರದ ಅಭಿವೃದ್ಧಿ ಬಗ್ಗೆ ರಾಹುಲ್ ತುಂಬಾ ಟೀಕಿಸಿದ್ದಾರೆ ಎಂಬುದನ್ನು ಕೇಳಿದ್ದೇನೆ. ಆದರೆ ನಾವು ಆ ಟೀಕೆ-ಟಿಪ್ಪಣಿಗಳಿಗೆಲ್ಲ ಬೆಲೆ ಕೊಡಲ್ಲ' ಎಂದು ಹೇಳಿದರು.
'ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ರಾಹುಲ್ ಆರೋಪಕ್ಕೆ, 70 ಇಲಿಗಳನ್ನು ತಿಂದ ನಂತರ ಬೆಕ್ಕು ಹಜ್ ಯಾತ್ರೆಗೆ ಹೋದಂತೆ (ಮಾಡೊದೆಲ್ಲಾ ಮಾಡಿಬಿಟ್ಟು ಪಾಪ ತೊಳೆಯಲು ಹಜ್‌ಗೆ ಹೋದಂತೆ) ಎಂಬ ಗಾದೆ ಮಾತನ್ನು ಉದಾಹರಿಸಿದ ನಿತೀಶ್, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಕ್ಕೆ ತಾಯಿ ಇದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೋಫೋರ್ಸ್ ಹಗರಣ, ಕಾಮನ್‌ವೆಲ್ತ್ ಕರ್ಮಕಾಂಡ, 2ಜಿ ತರಂಗಾಂತರ, ಆದರ್ಶ ಸೊಸೈಟಿ ಹಗರಣ ಇವೆಲ್ಲ ಕಾಂಗ್ರೆಸ್ ಪಕ್ಷದ ಭ್ರಷ್ಟತೆಗೆ ಸಾಕ್ಷಿ ಎಂದರು. ಸುಮಾರು 40 ವರ್ಷಗಳ ಕಾಲ ಬಿಹಾರವನ್ನು ಆಳಿದ್ದ ಕಾಂಗ್ರೆಸ್‌ನ ಬಗ್ಗೆ ಜನರಿಗೆ ಚೆನ್ನಾಗಿ ಗೊತ್ತು. ಹಾಗಾಗಿಯೇ ರಾಜ್ಯದ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.