2ಜಿ ಸ್ಪೆಕ್ಟ್ರಂ ವಿತರಣೆಯ ಹಗರಣದಲ್ಲಿ ಸಿಲುಕಿಕೊಂಡಿರುವ ಕೇಂದ್ರ ಟೆಲಿಕಾಂ ಸಚಿವ, ಡಿಎಂಕೆಯ ಎ.ರಾಜಾ ಅವರನ್ನು ಡಿಎಂಕೆ ಅಧ್ಯಕ್ಷ, ಮುಖ್ಯಮಂತ್ರಿ ಕರುಣಾನಿಧಿ ವಾಪಸ್ ಕರೆಸಿಕೊಳ್ಳದಿರುವ ಮೂಲಕ, ಪ್ರಜಾಪ್ರಭುತ್ವವನ್ನು ಧಿಕ್ಕರಿಸುತ್ತಿದ್ದಾರೆ ಎಂದು ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ ಆರೋಪಿಸಿದ್ದಾರೆ.
ಕೊಟ್ಟ ಕೊನೆಯಲ್ಲಿ ಇದೆಲ್ಲವೂ ಬಂದು ನಿಲ್ಲುವುದು ರಾಜಾ ಅವರ ಪಕ್ಷದ ಡಿಎಂಕೆ ಅಧ್ಯಕ್ಷ ಕರುಣಾನಿಧಿಯ ಮನೆ ಬಾಗಿಲಲ್ಲಿ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಜಯಾ, ದೇಶಕ್ಕೆ 1,90,000 ಕೋಟಿ ರೂಪಾಯಿಯಷ್ಟು ದೇಶದ ಖಜಾನೆಗೆ ನಷ್ಟ ತಂದಿರುವ ಸ್ಪೆಕ್ಟ್ರಂ ಹಗರಣದಲ್ಲಿ ರಾಜಾ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ, ಕೇಂದ್ರೀಯ ವಿಚಕ್ಷಣಾ ದಳ (ಸಿವಿಸಿ), ಸುಪ್ರೀಂ ಕೋರ್ಟ್ ಮುಂತಾದ ಪ್ರತಿಯೊಂದು ಸಾಂವಿಧಾನಿಕ ವೇದಿಕೆಗಳಿಂದ ಕಾರ್ಯತಃ ತಪ್ಪಿತಸ್ಥ ಎಂದು ಸಾಬೀತಾಗಿದ್ದರೂ, ಕರುಣಾನಿಧಿ ಅವರು ರಾಜಾ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕೃಪೆ ತೋರಿಸಲಿಲ್ಲ ಎಂದು ವ್ಯಂಗ್ಯವಾಡಿದರು.
ಹಣಕಾಸು ಮತ್ತು ಕೌಟುಂಬಿಕ ವಿಷಯಗಳು ಬಂದಾಗ ತಮ್ಮ "ನಿಷ್ಕ್ರಿಯತೆ"ಗೆ ಕರುಣಾನಿಧಿಗೆ ಸಾಕಷ್ಟು ನೆಪಗಳು ದೊರೆಯುತ್ತವೆ ಎಂದ ಆಕೆ, ಇಷ್ಟೆಲ್ಲಾ ಆದರೂ ರಾಜಾ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿರುವುದು ಖೇದಕರ ಎಂದರು.