ದೇಶದಲ್ಲಿ ಆರೆಸ್ಸೆಸ್ ಸಂಘಟನೆಗಳು ಭಯೋತ್ಪಾದನಾ ಚಟುವಟಿಕೆಯಲ್ಲಿ ಸಂಬಂಧ ಹೊಂದಿದೆ ಎಂದು ನೇರವಾಗಿ ಆರೋಪ ಮಾಡಿರುವ ಕಾಂಗ್ರೆಸ್, ಇವುಗಳ ಎಲ್ಲ ವಿವರಗಳನ್ನು ಬಯಲಿಗೆಳೆಯಬೇಕಾಗಿದೆ ಎಂದಿದೆ.
ನವದೆಹಲಿಯಲ್ಲಿ ಮಂಗಳವಾರ ನಡೆದ ಎಐಸಿಸಿ ಅಧಿವೇಶನದಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ ಬಳಿಕ (ಕ್ಲಿಕ್ ಮಾಡಿ), ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಮಾತನಾಡುತ್ತಾ ಈ ಆರೋಪ ಮಾಡಿ, ಕೋಮುವಾದಿಗಳು ಮತ್ತು ಭಯೋತ್ಪಾದಕ ಶಕ್ತಿಗಳ ವಿರುದ್ಧ ಹೋರಾಡಬೇಕಾಗಿದೆ ಎಂದರು.
ಇತ್ತೀಚೆಗಿನ ತನಿಖೆಗಳು ಆರೆಸ್ಸೆಸ್ ಮತ್ತದರ ಸೋದರ ಸಂಸ್ಥೆಗಳ ನಿಜ ಬಣ್ಣ ಬಯಲು ಮಾಡಿವೆ. ಅದರ ಸದಸ್ಯರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನ್ನು ತನಿಖೆಗಳು ಸೂಚಿಸುತ್ತಿವೆ ಎಂದು ಮುಖರ್ಜಿ ಹೇಳಿದರು.
ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಧರ್ಮಾಧಾರದಲ್ಲಿ ಸಮಾಜವನ್ನು ಒಡೆಯುವ ಎಲ್ಲ ರೀತಿಯ ಧಾರ್ಮಿಕ ವಿದ್ವೇಷಗಳು, ಪೂರ್ವಗ್ರಹಗಳ ವಿರುದ್ಧ ಹೋರಾಡುತ್ತದೆ ಎಂದು ಅಧಿವೇಶನ ಸಂದರ್ಭ ವಿತರಿಸಲಾದ ಎಐಸಿಸಿ ಹೇಳಿಕೆಯಲ್ಲಿಯೂ ತಿಳಿಸಲಾಗಿದೆ.
ಬೆಲೆ ಏರಿಕೆ ತಡೆಗೆ ರಾಜ್ಯಗಳ ಜವಾಬ್ದಾರಿಯೂ ಇದೆ... ದೇಶದೆಲ್ಲೆಡೆ ಹಾಹಾಕಾರವೆಬ್ಬಿಸಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲ್ಲಿ ರಾಜ್ಯಗಳ ಜವಾಬ್ದಾರಿಯೂ ಇದೆ ಎಂದಿರುವ ಕಾಂಗ್ರೆಸ್, ಬೆಲೆಯು ಕೈಗೆಟಕುವ ಮಟ್ಟಕ್ಕೆ ಬರುವಂತಾಗಲು ಕೇಂದ್ರ ಸರಕಾರವು ತನ್ನ ಪ್ರಯತ್ನ ದುಪ್ಪಟ್ಟುಗೊಳಿಸಬೇಕೆಂದು ಅಭಿಪ್ರಾಯಪಟ್ಟಿದೆ.
ಸತತ ನಾಲ್ಕನೇ ಬಾರಿ ಅಧ್ಯಕ್ಷೆಯಾಗಿ ಆಯ್ಕೆಯಾದ ಸೋನಿಯಾ ಗಾಂಧಿಯನ್ನು ಅಭಿನಂದಿಸಿರುವ ಕಾಂಗ್ರೆಸ್ ಹೇಳಿಕೆಯು, ಆಕೆಯ ನಾಯಕತ್ವದಲ್ಲಿ 125 ವರ್ಷ ಹಳೆಯ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ. ಅವರ ದಣಿವರಿಯದ ಮತ್ತು ನಿಸ್ವಾರ್ಥ ಪ್ರಯತ್ನಗಳು, ತ್ಯಾಗದ ವಿಶಿಷ್ಟ ಗುಣಗಳಿಂದಾಗಿ ಪಕ್ಷವಿಂದು ಈ ಮಟ್ಟಕ್ಕೆ ತಲುಪಿದೆ ಎಂದು ಶ್ಲಾಘಿಸಲಾಗಿದೆ.
ಅಂತೆಯೇ ರಾಹುಲ್ ಗಾಂಧಿ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಹಾಗೂ ಎನ್ಎಸ್‌ಯುಐ ತೆಗೆದುಕೊಂಡಿರುವ ಕ್ರಮಗಳನ್ನೂ ಶ್ಲಾಘಿಸಲಾಗಿದೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರೂ "ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತವನ್ನು ಸದೃಢ ಆರ್ಥಿಕ ಪ್ರಗತಿ"ಯತ್ತ ಕೊಂಡೊಯ್ಯಲು ಕಾರಣರಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಲಾಗಿದೆ.