ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಯುರ್ವೇದ ರ‌್ಯಾಂಕ್ ಹಂಚಿಕೊಂಡ ಮುಸ್ಲಿಂ ಅವಳಿ ಸೋದರಿಯರು (Twins | Ayurveda | Rank | PSV Medical College | Fasna | Hasna)
Bookmark and Share Feedback Print
 
ಅವಳಿ ಜವಳಿಗಳು ಎಲ್ಲದರಲ್ಲಿಯೂ ಏಕರೀತಿಯಲ್ಲಿರುತ್ತಾರೆ ಎಂಬ ಮಾತಿಗೆ ಅನುಗುಣವಾಗಿ, ಅವಳಿ ಸಹೋದರಿಯರಿಬ್ಬರು ಕೇರಳದ ಕಲ್ಲಿಕೋಟೆ ವಿವಿಯ ಆಯುರ್ವೇದ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಸಮವಾಗಿ ಹಂಚಿಕೊಂಡಿದ್ದಾರೆ.

ಕೋಟಕ್ಕಲ್ ಆಯುರ್ವೇದ ವೈದ್ಯಶಾಲೆ ನಡೆಸುತ್ತಿರುವ ಪಿಎಸ್‌ವಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯುರ್ವೇದ ವೈದ್ಯಕೀಯ ಪದವಿ (ಬಿಎಎಂಎಸ್) ಕೋರ್ಸು ಮಾಡುತ್ತಿದ್ದ ಫಸ್ನಾ ಮತ್ತು ಹಸ್ನಾ ಎಂಬ ಅವಳಿ ಸಹೋದರಿಯರು ಒಂದೇ ತರಗತಿಯಲ್ಲಿ, ಒಂದೇ ಬೆಂಚಿನಲ್ಲಿ ಕುಳಿತು ವಿದ್ಯಾಭ್ಯಾಸ ಮಾಡಿದವರಾಗಿದ್ದು, 1850ರಲ್ಲಿ 1308 ಅಂಕಗಳನ್ನು ಗಳಿಸಿ ಉನ್ನತ ಸ್ಥಾನವನ್ನೂ ಹಂಚಿಕೊಂಡಿದ್ದಾರೆ.

ಆಯುರ್ವೇದ ಅಧ್ಯಯನ ಮಾಡಬೇಕಿದ್ದರೆ ಅಪಾರ ಸಂಸ್ಕೃತ ಜ್ಞಾನವಿರಬೇಕಾಗಿರುವುದರಿಂದ ಮುಸಲ್ಮಾನ ಕುಟುಂಬವರಾದ ಇವರು ಪರೀಕ್ಷೆಯಲ್ಲಿ ಯಾವ ರೀತಿ ಸಾಧನೆ ಮಾಡುತ್ತಾರೆ ಎಂಬ ಕುತೂಹಲವು ಬೋಧಕ ವರ್ಗಕ್ಕಿತ್ತು.

"ಇದು ನಮ್ಮ ಕಾಲೇಜಿಗೆ ದೊರೆತ ಅತ್ಯಂತ ಅಪರೂಪದ ಗೌರವ. ಅವರ ಕಠಿಣ ಪರಿಶ್ರಮ, ಕಲಿಕೆಯ ನಿಷ್ಠೆ ಮತ್ತು ಸಾಧನೆಗಳಿಂದಾಗಿ ಇದು ಸಾಧ್ಯವಾಗಿದೆ" ಎಂದು ಕಾಲೇಜು ಪ್ರಾಂಶುಪಾಲ ಡಾ.ಎಂ.ಪಿ.ಈಶ್ವರ ಶರ್ಮಾ ಅವರು ಸಂತೋಷದಿಂದ ಪ್ರತಿಕ್ರಿಯಿಸಿದ್ದಾರೆ.

"ಸಂಸ್ಕೃತ ಕಲಿತರೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಮುಸ್ಲಿಂ ಕುಟುಂಬದಲ್ಲಿ ಹೆಚ್ಚಿನವರು ಆಯುರ್ವೇದ ವೈದ್ಯಕೀಯ ಕೋರ್ಸು ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಇಂತಹಾ ಅಪನಂಬಿಕೆಗಳು ಹಸ್ನಾ ಮತ್ತು ಫಸ್ನಾರನ್ನು ಧೃತಿಗೆಡಿಸಲಿಲ್ಲ" ಎಂದು ಡಾ.ಶರ್ಮಾ ವಿವರಿಸಿದ್ದಾರೆ.

ಬಹುತೇಕ ಎಲ್ಲ ಪರೀಕ್ಷೆಗಳಲ್ಲಿಯೂ ಈ ಸಹೋದರಿಯರು ಹೆಚ್ಚೂ-ಕಡಿಮೆ ಒಂದೇ ರೀತಿ ಅಂಕಗಳನ್ನು ಗಳಿಸುತ್ತಿದ್ದರು ಎಂದು ಅವರ ತಂದೆ ಹಂಜಾ ಎಂಬವರು ಹೇಳಿದ್ದು, ಮಕ್ಕಳು ಇನ್ನಷ್ಟು ಹೆಚ್ಚಿನ (ಸ್ನಾತಕೋತ್ತರ) ವಿದ್ಯಾಭ್ಯಾಸ ಮಾಡಲಿದ್ದಾರೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ