ಭ್ರಷ್ಟ ಅಧಿಕಾರಿಗಳ ಅಕ್ರಮ ಕಟ್ಟಡ ಇನ್ಮುಂದೆ ಶಾಲೆ!: ನಿತೀಶ್ ಕಿಡಿ
ಬಿಹಾರ, ಬುಧವಾರ, 3 ನವೆಂಬರ್ 2010( 13:12 IST )
ರಾಜ್ಯದ ಭ್ರಷ್ಟ ಅಧಿಕಾರಿಗಳನ್ನು ಜೈಲಿಗೆ ಅಟ್ಟಿ, ಅವರ ಅಕ್ರಮ ಕಟ್ಟಡಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. ಹೀಗೆ ಬಹಿರಂಗವಾಗಿ ಘೋಷಿಸಿದವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್.
ಬಿಹಾರ್ ಷರೀಫ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಮಾತನಾಡಿದ ಅವರು, ಈ ರೀತಿ ತಿಳಿಸಿದ್ದಾರೆ. ಭ್ರಷ್ಟ ಅಧಿಕಾರಿಗಳ ಹೆಸರಿನಲ್ಲಿರುವ ಆಸ್ತಿ ಮುಟ್ಟುಗೋಲು ಹಾಕುವ ಸಲುವಾಗಿ ನೂತನ ಶಾಸನ ಜಾರಿಗೆ ತರಲಿದ್ದೇವೆ ಎಂದರು.
ಈ ಚುನಾವಣೆಯಲ್ಲಿ ಜನರು ಮತ್ತೆ ಜೆಡಿ(ಯು) ಕೈ ಹಿಡಿಯುವ ಮೂಲಕ ಬಾಕಿ ಉಳಿದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಸಹಕಾರ ನೀಡಬೇಕೆಂದು ನಿತೀಶ್ ಈ ಸಂದರ್ಭದಲ್ಲಿ ಮತದಾರರಲ್ಲಿ ಮನವಿ ಮಾಡಿಕೊಂಡರು.
ಅಷ್ಟೇ ಅಲ್ಲ 2015ರೊಳಗೆ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಅವರು ಭರವಸೆ ನೀಡಿದರು. ಆ ನಿಟ್ಟಿನಲ್ಲಿ ಮುಂದಿನ ಅಧಿಕಾರ ಅಧಿಕಾರಾವಧಿ ಮುಕ್ತಾಯಗೊಳಿಸಲು ಜನರು ಆಶೀರ್ವಾದ ನೀಡಬೇಕು ಎಂದರು.
ಕಳೆದ ಐದು ವರ್ಷಗಳಲ್ಲಿ ಸರಕಾರ ರಾಜ್ಯದಲ್ಲಿ ತುಂಬಾ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಸೈಕಲ್ ನೀಡುವಿಕೆ ಯೋಜನೆ ಕೂಡ ರಾಜ್ಯದಲ್ಲಿ ಭರ್ಜರಿ ಯಶಸ್ವಿಯಾಗಿರುವುದಾಗಿ ಹೇಳಿದರು.
ಏತನ್ಮಧ್ಯೆ ಕಳೆದ ಐದು ವರ್ಷಗಳಲ್ಲಿ ಬಿಹಾರದಲ್ಲಿ ಕೈಗಾರಿಕೆಗಳ ಸಾಲು ಕಾಣುವುದರ ಬದಲು, ಮದ್ಯದಂಗಡಿಗಳೇ ಮಿಂಚುತ್ತಿವೆ. ಅಭಿವೃದ್ಧಿ ಹೆಸರಿನಲ್ಲಿ ನಿತೀಶ್ ಸರಕಾರ ಜನರನ್ನು ಮೋಸಗೊಳಿಸುತ್ತಾ ಬಂದಿದೆ ಎಂದು ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಆಪಾದಿಸಿದ್ದಾರೆ.