ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಅಜ್ಜಂದಿರು ಪ್ರಧಾನಿ, ಮಂತ್ರಿ, ಶಾಸಕರಾಗಬಹುದಾದ್ರೆ ನಾವೇಕಿಲ್ಲ?'
(Age Restriction | Sports Federation Of India | PM | V K Malhotra | Tenure Fix | High Court)
ದೇಶದ ಪ್ರಧಾನಿಯೇ 70 ಮೀರಿದವರಾಗಿದ್ದರೆ, ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಮುಖ್ಯಸ್ಥರೂ ಅದೇ ವಯಸ್ಸಿನವರಾಗಿರುವುದರಲ್ಲಿ ತಪ್ಪೇನು ಎಂದು ಭಾರತೀಯ ಬಿಲ್ಗಾರಿಕೆ ಒಕ್ಕೂಟದ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳಿಗೆ ವಯೋಮಿತಿ ಹಾಗೂ ಅಧಿಕಾರಾವಧಿ ನಿಗದಿ ಪಡಿಸಿರುವ ಕ್ರೀಡಾ ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರಕ್ಕೆ ನೀಡಿರುವ ಆದೇಶವು ಕ್ರೀಡಾ ಒಕ್ಕೂಟದ ಮುಖ್ಯಸ್ಥರು, ಅಧಿಕಾರಿಗಳಲ್ಲಿ ತೀವ್ರ ಕಳವಳ ಮೂಡಿಸಿದ್ದು, ತಮ್ಮ ಕೋಪವನ್ನೆಲ್ಲಾ ಸರಕಾರದ ಮೇಲೆ ತಿರುಗಿಸಿದ್ದಾರೆ.
ಭಾರತದ ಪ್ರಧಾನಮಂತ್ರಿಗೆ, ಸಚಿವರುಗಳಿಗೆ, ಶಾಸಕರಿಗೆ, ಸಂಸದರಿಗೆ ಅಥವಾ ರಾಜ್ಯಗಳ ಮುಖ್ಯಮಂತ್ರಿಗಳಿಗೆಲ್ಲಾ ವಯಸ್ಸಿನ ಪರಿಮಿತಿ ಇಲ್ಲ. ಇಷ್ಟಲ್ಲದೆ, ದೇಶದ ಯಾವುದೇ ನೋಂದಾಯಿತ ಸಂಸ್ಥೆಗಳಿಗೂ ಈ ನಿಯಮ ಅನ್ವಯಿಸುವುದಿಲ್ಲ. ಹೀಗಿರುವಾಗ ಕ್ರೀಡಾ ಸಂಸ್ಥೆಗಳಿಗೆ ಮಾತ್ರವೇ ಇದೇಕೇ ಅನ್ವಯವಾಗಬೇಕು ಎಂದು 78ರ ಹರೆಯದ ವಿ.ಕೆ.ಮಲ್ಹೋತ್ರಾ ಪ್ರಶ್ನಿಸಿದ್ದಾರೆ.
ಉತ್ತಮ ಆಡಳಿತ ನೀಡಬೇಕಿದ್ದರೆ 70ಕ್ಕಿಂತ ಕಡಿಮೆ ವಯಸ್ಸಿರಬೇಕು ಎಂಬುದೇ ಖಚಿತವಾದರೆ, ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಅವರು 76ರ ವಯಸ್ಸಿನಲ್ಲಿಯೂ ದೇಶವಾಳುತ್ತಿಲ್ಲವೇ? ದೆಹಲಿಯ ಶೀಲಾ ದೀಕ್ಷಿತ್ ಸೇರಿದಂತೆ ದೇಶದಲ್ಲಿರುವ ಹಲವಾರು ಮುಖ್ಯಮಂತ್ರಿಗಳು 70ಕ್ಕಿಂತ ಹೆಚ್ಚು ವಯಸ್ಸಿನವರು ಎಂದು ಅವರು ಹೇಳಿದ್ದಾರೆ.
ಭಾರತದ ಕ್ರೀಡಾ ಸಚಿವ ಎಂ.ಎಸ್.ಗಿಲ್ ಕೂಡ 70ಕ್ಕಿಂತ ಹೆಚ್ಚು ವಯಸ್ಸಿನವರು. ಇವರೆಲ್ಲರೂ ಉತ್ತಮ ಆಡಳಿತ ದೊರಕಿಸುವ ನಿಟ್ಟಿನಲ್ಲಿ ತಮ್ಮ ಹುದ್ದೆಗಳನ್ನು ತೊರೆದರೆ ನಾವೂ ಹುದ್ದೆ ತೊರೆಯುತ್ತೇವೆ ಎಂದಿದ್ದಾರೆ ಮಲ್ಹೋತ್ರಾ.
62 ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳಲ್ಲಿ, ಅಥ್ಲೆಟಿಕ್ಸ್, ಟೆನಿಸ್, ಬಾಕ್ಸಿಂಗ್ ಮತ್ತು ಹಿಲ್ಗಾರಿಕೆ ಸೇರಿದಂತೆ 24 ಸಂಸ್ಥೆಗಳು ಸರಕಾರದ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ಕ್ರೀಡಾ ಸಚಿವಾಲಯವು ಮಂಗಳವಾರ ಹೇಳಿತ್ತು.
ರಾಷ್ಟ್ರೀಯ ಕ್ರೀಡಾ ನೀತಿಯನ್ನು ಸರಿಯಾಗಿ ಪಾಲಿಸುವಂತೆ ದೆಹಲಿ ಹೈಕೋರ್ಟು ಕೇಂದ್ರಕ್ಕೆ ನಿರ್ದೇಶಿಸಿದಾಗ, ಕೇಂದ್ರವು ಈ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯ ಪ್ರಕಾರ, ಶೇ.40ರಷ್ಟು ಕ್ರೀಡಾ ಸಂಸ್ಥೆಗಳು ನಿಯಮ ಉಲ್ಲಂಘಿಸಿ, ಅದರ ಪದಾಧಿಕಾರಿಗಳು ನಿಗದಿ ಮಾಡಿದ 8ಕ್ಕಿಂತ ಹೆಚ್ಚು ವರ್ಷಗಳಿಂದ ಅಧಿಕಾರದಲ್ಲಿದ್ದಾರೆ.
ಮೇ 1ರಂದು ಈ ನಿಯಮಾವಳಿಗಳನ್ನು ಹೊರಡಿಸಲಾಗಿತ್ತು. ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಅಧ್ಯಕ್ಷರ ಅವಧಿಯನ್ನು 12 ವರ್ಷಗಳಿಗೆ, ಹಾಗೂ ಕಾರ್ಯದರ್ಶಿ ಮತ್ತು ಖಜಾಂಚಿಯ ಅಧಿಕಾರಾವಧಿಯನ್ನು ತಲಾ 4 ವರ್ಷಗಳುಳ್ಳ ಗರಿಷ್ಠ ಎರಡು ಅವಧಿಗೆ ನಿಗದಿಪಡಿಸಲಾಗಿತ್ತು. ಈ ನೀತಿಯ ಪ್ರಕಾರ, 70ಕ್ಕಿಂತ ಹೆಚ್ಚು ವಯಸ್ಸಿನವರು ಕ್ರೀಡಾ ಸಂಸ್ಥೆಯ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ವಿ.ಕೆ.ಮಲ್ಹೋತ್ರಾ ಅವರು ಕಳೆದ 31 ವರ್ಷಗಳಿಂದ ತಮ್ಮ ಸ್ಥಾನಕ್ಕೆ ಕಚ್ಚಿಕೊಂಡಿದ್ದಾರೆ. ಆ ಬಳಿಕದ ಸ್ಥಾನ, ಏರೋ ಕ್ಲಬ್ ಅಧ್ಯಕ್ಷ ಕ್ಯಾಪ್ಟನ್ ಸತೀಶ್ ಕೆ.ಶರ್ಮಾ ಅವರದು. 24 ವರ್ಷಗಳಿಂದ ಅವರು ಆ ಹುದ್ದೆಯಲ್ಲಿದ್ದಾರೆ. ಬಳಿಕ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಣಧೀರ್ ಸಿಂಗ್ (23 ವರ್ಷ), ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಕಲ್ಮಾಡಿ (15 ವರ್ಷ) ಹಾಗೂ ಸೈಕ್ಲಿಂಗ್ ಫೆಡರೇಶನ್ ಅಧ್ಯಕ್ಷ ಸುಖದೇವ್ ಸಿಂಗ್ ಧೀಂಡ್ಸಾ (13 ವರ್ಷ) ಇದ್ದಾರೆ.
ದೇಶವಾಳುವವರು, ರಾಜ್ಯವಾಳುವವರು, ಮಂತ್ರಿಗಳು, ಸಂಸದರು, ಶಾಸಕರು... ಇವರಿಗೆಲ್ಲಾ ವಯೋಮಿತಿ ನಿಗದಿಪಡಿಸಬೇಕೇ? ಒಂದೆರಡು ಅವಧಿಗೆ ಅಧಿಕಾರದಲ್ಲಿರಬಹುದು, 70 ದಾಟಿದ ನಂತರ ತೊಲಗಬೇಕು ಎಂಬ ನೀತಿ ಸಾಧುವೇ? ನೀವೇನಂತೀರಿ?