ಇದೊಂದು ವಿಚಿತ್ರ ಕಿಡ್ನ್ಯಾಪ್ ಪ್ರಕರಣ. ಅಪಹರಣಕಾರರಿಬ್ಬರೂ ಎಂಬಿಎ ಪದವೀಧರರು ಮತ್ತು ವಿದೇಶದಲ್ಲಿ ಉದ್ಯೋಗದಲ್ಲಿಯೂ ಇದ್ದವರು. ಇದೀಗ ಬಾಲಕನನ್ನು ಅಪಹರಿಸಿ ಒಂದು ಕೋಟಿ ರೂಪಾಯಿ ಒತ್ತೆ ಹಣ ಪಡೆದಿದ್ದ ಈ ಸುಶಿಕ್ಷಿತ ವ್ಯಕ್ತಿಗಳನ್ನು ಎರಡು ದಿನಗಳಲ್ಲೇ ಪೊಲೀಸರು ಬಂಧಿಸಿ, ಬಾಲಕನನ್ನು ರಕ್ಷಿಸಿದ್ದಾರಲ್ಲದೆ, ಒತ್ತೆ ಹಣ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ಯಂತ ಅಪರೂಪದ ಈ ಪ್ರಕರಣದಲ್ಲಿ, ಒಬ್ಬ ಆರೋಪಿಯು ಬ್ರಿಟನ್‌ನಲ್ಲಿ ಮ್ಯಾನೇಜ್‌ಮೆಂಟ್ ಪದವಿ ಪೂರೈಸಿದವ ಮತ್ತು ಅಲ್ಲೇ ಉದ್ಯೋಗ ಮಾಡಿ ಬಂದವ. ಇನ್ನೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಸಿಂಗಾಪುರದಲ್ಲಿ ಕೆಲಸ ಮಾಡಿ ಭಾರತಕ್ಕೆ ಮರಳಿದವ! ಅವರಿಬ್ಬರಿಗೂ ಬಿಡಲಾರದ ಹಣದ ದುರಾಸೆ. ಇದಕ್ಕಾಗಿ ಈ ಪ್ಲ್ಯಾನ್ ಮಾಡಿದ್ದರು.
14 ವರ್ಷದ ಕೀರ್ತಿ ವಾಸನ್ ಇದೀಗ ಅಪಹಾರಕರಿಂದ ರಕ್ಷಿಸಲ್ಪಟ್ಟ ಹುಡುಗ. ಮಂಗಳವಾರ ಒತ್ತೆ ಹಣ ಪಾವತಿಸಲಾಗಿತ್ತು. ಬಾಲಕ ಮರಳಿದ್ದರೂ ಪೊಲೀಸರೇಕೆ ಅವರನ್ನು ಬಂಧಿಸಲಿಲ್ಲ ಎಂಬುದು ಹೆಚ್ಚಿನವರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಅದಾಗಲೇ ಅವರನ್ನು ಬಂಧಿಸಲು ಯೋಜನೆ ರೂಪಿಸಿದ್ದರು ಚೆನ್ನೈ ಪೊಲೀಸರು, ಈ ಬಾಲಕನ ಹೆತ್ತವರಲ್ಲಿ ಅಷ್ಟೊಂದು ಹಣವಿರಲಿಲ್ಲ. ಪೊಲೀಸರೇ ಹಣ ಒಟ್ಟುಗೂಡಿಸಲು ನೆರವು ಮಾಡಿದ್ದರು ಎಂದು ಚೆನ್ನೈ ಪೊಲೀಸ್ ಕಮಿಶನರ್ ಟಿ.ರಾಜೇಂದ್ರನ್ ತಿಳಿಸಿದ್ದಾರೆ.
ಬಂಧಿತ ಆರ್.ವಿಜಯ್ ಕುಮಾರ್ (26) ಎಂಬಾತ ಬಿ.ಟೆಕ್ ಪದವೀಧರನಾಗಿದ್ದು, ಬ್ರಿಟನ್‌ನ ವಿವಿಯೊಂದರಿಂದ ಮ್ಯಾನೇಜ್‌ಮೆಂಟ್ ಪದವಿ ಪಡೆದವನು. ಮತ್ತೊಬ್ಬ ಆರೋಪಿ ಕೆ.ಪ್ರಭು (29) ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದಿದ್ದು, ಅರೆ-ಕಾಲಿಕ ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಯಾಗಿದ್ದ. ಅವರಿಬ್ಬರೂ ಸೋದರ ಸಂಬಂಧಿಗಳು.
ಚೆನ್ನೈ ಮೊಗಪ್ಪೇರ್ ಎಂಬಲ್ಲಿನ ಡಿಎವಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಕೀರ್ತಿವಾಸನ್‌ನನ್ನು ಸೋಮವಾರ ಸಂಜೆ ಶಾಲೆಯಿಂದ ಬರುತ್ತಿದ್ದಾಗ, ಆತನ ಕಾರಿನ ಚಾಲಕನಿಗೆ ಚಾಕು ತೋರಿಸಿ, ಅಪಹರಿಸಲಾಗಿತ್ತು. ಗ್ರಾನೈಟ್ ಉದ್ಯಮಕ್ಕೆ ಸಂಬಂಧಿಸಿ ವ್ಯವಹಾರ ನಡೆಸುತ್ತಿರುವ ಈ ಬಾಲಕನ ತಂದೆ ರಮೇಶ್‌ಗೆ ಆ ಬಳಿಕ, ಮಗನನ್ನು ಬಿಡಬೇಕಿದ್ದರೆ 3 ಕೋಟಿ ರೂ.ಗಳ ಒತ್ತೆ ಹಣ ನೀಡಬೇಕೆಂಬ ಬೇಡಿಕೆ ಕರೆ ಬಂದಿತ್ತು. ಹಿಂದಿನ ದಿನವಷ್ಟೇ ಕೊಯಮತ್ತೂರಿನಲ್ಲಿ ಇಬ್ಬರು ಶಾಲಾ ಬಾಲಕರನ್ನು ಅಪಹರಿಸಿ, ಕೊಲೆ ಮಾಡಲಾಗಿತ್ತು. ಹೀಗಾಗಿ ಚೆನ್ನೈ ಪೊಲೀಸರ ಮೇಲೆ ಹೆಚ್ಚಿನ ಒತ್ತಡವೂ ಇತ್ತು.
ಹೀಗಾಗಿ ಮರುದಿನವೇ ಪೊಲೀಸರು ಪತ್ರಿಕಾಗೋಷ್ಠಿ ಕರೆದು, ಬಾಲಕ "ಕನಿಷ್ಠ ಒತ್ತೆಹಣ" ನೀಡಿ ರಕ್ಷಿಸಲಾಗಿದೆ, ಆದರೆ ಅಪಹರಣಕಾರರನ್ನು ಹಿಡಿಯಲಾಗಲಿಲ್ಲ ಎಂದು ಪತ್ರಿಕಾಗೋಷ್ಠಿ ಕರೆದು ಪ್ರಕಟಿಸಿದರು. ಆದರೆ ಪೊಲೀಸರ ಯೋಜನೆಯೇ ಬೇರೆಯಾಗಿತ್ತು.
ಇತ್ತ, ಅಪಹರಣಕಾರರೊಂದಿಗೆ ಚೌಕಾಶಿ ಮಾಡುವಂತೆ ರಮೇಶ್‌ಗೆ ಸೂಚಿಸಿದ್ದರು ಪೊಲೀಸರು. ಕೊನೆಗೆ ಅಪಹರಣಕಾರರು 1 ಕೋಟಿಗೆ ಬೇಡಿಕೆ ತಗ್ಗಿಸಿದರು. ಮಂಗಳವಾರ ಸಂಜೆ, ಹುಡುಗನನ್ನು ಅವನ ಮನೆ ಬಳಿಯ ಗ್ಯಾರೇಜಿನಲ್ಲಿರುವ ಕಾರಿನ ಡಿಕ್ಕಿಯಲ್ಲಿದೆ ಎಂದು ತಿಳಿಸಿ ಬಿಡಲಾಯಿತು ಮತ್ತು ಬೈಕಿನಲ್ಲಿ ಬಂದ ಅಪಹರಣಕಾರ ವಿಜಯ್ ಕುಮಾರ್ ಹಣ ಪಡೆದು ತೆರಳಿದ. ಆದರೆ ಬೈಕಿನ ನಂಬರ್ ಪ್ಲೇಟ್ ಕಾಣಿಸದಂತೆ ಅವನು ಬಟ್ಟೆ ಸುತ್ತಿದ್ದ. ಆದರೆ ಗಾಳಿಗೆ ಅದು ಹಾರಿ ಹೋಗಿ ಅದರ ನಂಬರ್ ಬಯಲಾಗಿತ್ತು.
ರಮೇಶ್ ಆ ಬೈಕಿನ ನೋಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಂಡರು, ಅಂತೆಯೇ ಅವನಿಂದ ಬಂದ ಕರೆಗಳನ್ನೂ ಪೊಲೀಸರು ಟ್ರ್ಯಾಕ್ ಮಾಡಿದ್ದರು. ಬೈಕಿನ ಹಿಂದೆ ಬಿದ್ದಾಗ, ಆ ಬೈಕು ವಿಜಯ್ ಕುಮಾರ್ ಹೆಸರಲ್ಲಿ ನೋಂದಣಿಯಾಗಿದ್ದುದನ್ನು ಪೊಲೀಸರು ತಿಳಿದುಕೊಂಡರು. ಜಾಡು ಪಡೆದು ವಿಜಯ್ ಕುಮಾರ್ ಮತ್ತು ಸಹಾಯ ಮಾಡಿದ ಪ್ರಭುವನ್ನೂ ಬಂಧಿಸಲಾಯಿತು. ಇವರಿಬ್ಬರೂ 3 ತಿಂಗಳಿಂದ ಈ ಉದ್ಯಮಿಯ ಮಗನ ಅಪಹರಣಕ್ಕೆ ಸ್ಕೆಚ್ ಹಾಕಿದ್ದು, ಬೆದರಿಕೆ ಕರೆಯನ್ನೂ ಮಾಡಿದ್ದರು. ಆ ಬಳಿಕ ಬಾಲಕನ ರಕ್ಷಣೆಗೆ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಿದ್ದ ಉದ್ಯಮಿ ರಮೇಶ್, ಮನೆಯ ಸುತ್ತ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಿದ್ದರು.
ಆದರೆ ಈ ಅಪಹರಣ ನಡೆದಾಗ ಸೆಕ್ಯುರಿಟಿ ಗಾರ್ಡ್‌ಗಳು ಕಾರಿನಲ್ಲಿರಲಿಲ್ಲ. ಚಾಲಕ ಮಾತ್ರವೇ ಈ ಬಾಲಕನೊಂದಿಗಿದ್ದ ಸಮಯ ಸಾಧಿಸಿ ಅಪಹರಣಕಾರರು ಈ ಕೃತ್ಯ ಎಸಗಿದ್ದರು.
ಅಪಹರಣಕಾರರು ರಮೇಶ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರಲ್ಲೊಬ್ಬರ ಸಂಬಂಧಿಕರು ಎಂದು ಪೊಲೀಸರು ತಿಳಿಸಿದ್ದಾರೆ.