ದೀಪಾವಳಿ ಎಂದರೆ ದುಡ್ಡಿನ ಅಧಿದೇವತೆಯಾದ ಲಕ್ಷ್ಮೀ ಪೂಜೆಯ ಸಮಯ. ದೀಪಾವಳಿ ಶಾಪಿಂಗ್‌ಗೆ ಚಿನ್ನ, ರತ್ನ, ಉಡುಪು ಎಲ್ಲಾ ಖರೀದಿ ಮಾಡುತ್ತಾರೆ ಜನ. ಆದರೆ ಇಲ್ಲೊಬ್ಬ ಮಹಾಶಯ ಸದಾ ಹಣ ಕೊಡುವ ಯಂತ್ರ ಎಂದೇ ಖ್ಯಾತಿ ಪಡೆದಿರುವ ಎಟಿಎಂ (ಆಟೋಮೇಟೆಡ್ ಟೆಲ್ಲರ್ ಮೆಶಿನ್) ಅನ್ನೇ ಖರೀದಿಸಿದ್ದಾರೆ!
ಉತ್ತರ ಭಾರತದಲ್ಲಿ ದೀಪಾವಳಿ ಆಚರಣೆ ಆರಂಭವಾಗುವುದೇ ಧನ್‌ತೇರಸ್ (ಧನ ತ್ರಯೋದಶಿ) ದಿನವಾದ ಬುಧವಾರ. ಆ ದಿನ ಚಿನ್ನಾಭರಣ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ದಕ್ಷಿಣ ಭಾರತಕ್ಕೂ ಇದೀಗ ವ್ಯಾಪಿಸಿರುವುದು ನಿಮಗೆಲ್ಲ ಗೊತ್ತೇ ಇದೆ.
ಈ ಧನ್‌ತೇರಸ್ ದಿನ ಲಕ್ಷ್ಮೀಯ ಆವಾಸಸ್ಥಾನವಾದ ಎಟಿಎಂ ಯಂತ್ರವನ್ನೇ ಖರೀದಿಸಿದರೆ, ಜೀವನ ಪರ್ಯಂತ ಏಳಿಗೆ ಎಂಬ ನಂಬಿಕೆಯಿಂದ ಭೋಪಾಲದ ಉದ್ಯಮಿ ರಾಜೇಶ್ ಜೇತ್ಪುರಿಯಾ ಎಂಬವರು 7 ಲಕ್ಷ ರೂ. ಕೊಟ್ಟು ಕೆನಡಾದ ಎಟಿಎಂ ಯಂತ್ರ ತಯಾರಿಸುವ 'ಈಝೀ ರುಪೀ ಎಟಿಎಂ' ಕಂಪನಿಯಿಂದ ಅದನ್ನು ಖರೀದಿ ಮಾಡಿದ್ದಾರೆ.
ಈ ಮೂಲಕ, ದೇಶದ ಮೊದಲ ಖಾಸಗಿ ಎಟಿಎಂ ಮಾಲೀಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಎಟಿಎಂ ಹೊಂದುವುದು ಕಾನೂನುಬದ್ಧವಾಗಿದ್ದು, ಇನ್ನೂ ಐದು ಎಟಿಎಂ ಖರೀದಿಸುವ ನಿರ್ಧಾರ ಮಾಡಿದ್ದಾರೆ ಜೇತ್ಪುರಿಯಾ.
ದೇಶದ ಪ್ರಮುಖ ಬ್ಯಾಂಕುಗಳಿಗೆ ಎಟಿಎಂ ನಿರ್ವಹಣೆ ತ್ರಾಸದಾಯಕವಾಗಿರುವುದರಿಂದ ಅವುಗಳನ್ನು ಬೇರೆ ಕಂಪನಿಗಳಿಗೆ ಹೊರಗುತ್ತಿಗೆ ನೀಡಿವೆ. ಆರ್‌ಬಿಐ ಉದಾರೀಕರಣ ನೀತಿಯೂ ಇದಕ್ಕೆ ಅನುಮತಿಸಿದ್ದು, ಎಟಿಎಂ ನಿರ್ವಹಣೆಗೆ ಬ್ಯಾಂಕುಗಳು ತಿಂಗಳಿಗೆ 1ರಿಂದ 1.5 ಲಕ್ಷ ಪಾವತಿಸಬೇಕಾಗುತ್ತದೆ. ಆರ್‌ಬಿಐ ನಿಯಮದ ಪ್ರಕಾರ, ವ್ಯಕ್ತಿಗಳು ಎಟಿಎಂ ಹೊಂದಬಹುದಾಗಿದ್ದರೂ, ಅದರಲ್ಲಿ ಬ್ಯಾಂಕಿನ ಹಣ ಇರಬೇಕು. ವ್ಯಕ್ತಿಗಳು ಅದನ್ನು ನಿರ್ವಹಿಸಬಹುದು ಹಾಗೂ ಇದಕ್ಕಾಗಿ ಪ್ರತೀ ವ್ಯವಹಾರಕ್ಕೆ ಇಂತಿಷ್ಟು ಕಮಿಶನ್ ಪಡೆಯಬಹುದು.