ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಕಾಶ್ಮೀರ ಪ್ರತ್ಯೇಕತವಾದಿ ಮುಖಂಡ ಶಾಬಿರ್ ಅಹ್ಮದ್ ಷಾನನ್ನು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಚೆನ್ನಾಗಿ ಥಳಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ಗುರುವಾರ ನಡೆದಿದೆ.
ಬುಧವಾರವಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಡೆಮೋಕ್ರಟಿಕ್ ಫ್ರೀಡಂ ಪಕ್ಷದ ವರಿಷ್ಠ ಶಾ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಏಕಾಏಕಿ ಭಾರತೀಯ ಜನತಾ ಯುವ ಮೋರ್ಚಾದ (ಬಿಜೆವೈಎಂ) ಸುಮಾರು 10-12 ಮಂದಿ ಕಾರ್ಯಕರ್ತರು ಒಳನುಗ್ಗಿ ಹಿಗ್ಗಾಮುಗ್ಗಾ ಎಳೆದಾಡಿದ್ದರು. ಅಷ್ಟೇ ಅಲ್ಲ ಪೀಠೋಪಕರಣ, ಮೈಕ್ರೋಫೋನ್ ಅನ್ನು ಕಿತ್ತು ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶಾನನ್ನು ಇಬ್ಬರು ಕಾರ್ಯಕರ್ತರು ಹಿಡಿದು ಥಳಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಮೂರು ಮಂದಿಯನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿಸಿರುವ ಪೊಲೀಸ್ ಅಧಿಕಾರಿಗಳು, ಉಳಿದವರು ಅಲ್ಲಿಂದ ಕಾಲ್ಕಿತ್ತಿರುವುದಾಗಿ ವಿವರಿಸಿದ್ದಾರೆ.
ಏಕಾಏಕಿ ನಡೆದ ಘಟನೆಯಿಂದ ವಿಚಲಿತರಾದ ಶಾ, ನಂತರ ಪತ್ರಿಕಾಗೋಷ್ಠಿಯನ್ನು ಮುಂದುವರಿಸಿದರು. ಪ್ರತ್ಯೇಕತವಾದಿ ಶಾ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೋಷಣೆ ಕೂಗಿ, ಜಮ್ಮು ವಿರೋಧಿ ನೀತಿ ಹೊಂದಿರುವವರು ಇಲ್ಲಿ ಭಾಷಣ ಮಾಡುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಶಾ ಅವರಿಗೆ ಯಾವುದೇ ತೊಂದರೆಯಾಗದೆ ಅಪಾಯದಿಂದ ಪಾರಾಗಿದ್ದಾರೆಂದು ಐಜಿಪಿ ಅಶೋಕ್ ಗುಪ್ತಾ ತಿಳಿಸಿದ್ದಾರೆ. ಅಹ್ಮದ್ ಶಾ ಸುಮಾರು 9 ತಿಂಗಳ ಕಾಲ ಜೈಲುವಾಸ ಅನುಭವಿಸಿ, ಬುಧವಾರ ಬಿಡುಗಡೆಗೊಂಡಿದ್ದರು.