ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಪಾಲುದಾರ ಪಕ್ಷಗಳಾಗಿರುವ ಬಿಜೆಪಿ ಮತ್ತು ಜೆಡಿ(ಯು) ಸಂಪೂರ್ಣವಾಗಿ ಸೋಲುವುದಾಗಿ ಭವಿಷ್ಯ ನುಡಿದಿರುವ ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್, ಬಿಹಾರದ ಮುಂದಿನ ಮುಖ್ಯಮಂತ್ರಿ ತಾನೇ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
'ನಮಗೆ ದೊರೆತಿರುವ ಮಾಹಿತಿ ಪ್ರಕಾರ ಈಗಾಗಲೇ ನಡೆದಿರುವ 182 ವಿಧಾನಸಭಾ ಕ್ಷೇತ್ರಗಳ ಮತದಾನದಲ್ಲಿ ಎನ್‌ಡಿಎಗೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ದೊರೆಯುವುದಿಲ್ಲ. ಆ ನಿಟ್ಟಿನಲ್ಲಿ ಆರ್‌ಜೆಡಿ ಮತ್ತೆ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಜೆಹಾನಾಬಾದ್‌ನಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದ್ದಾರೆ.
'ನಾನು ನಿಮಗೆ ಹೇಳುತ್ತಿದ್ದೇನೆ, ನಾನೇ ಈ ತಿಂಗಳಿನಲ್ಲಿ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಲಿದ್ದೇನೆ. ನಿಮ್ಮ ಸೇವೆ ಮಾಡಲು ನಾನು ತಯಾರಾಗಿದ್ದೇನೆ' ಎಂದು ಹೇಳಿದರು.
ಎಲ್ಲಾ ರೀತಿಯಿಂದಲೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಲಾಲೂ, 2005ರ ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸಿದ್ದ ಮತದಾರರಿಗೆ ನಿತೀಶ್ ಮೋಸ ಮಾಡಿರುವುದಾಗಿ ಟೀಕಿಸಿದರು.
ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ ನಂತರ ಅವರ ಆಡಳಿತ ತುಂಬಾ ಸಿಹಿ ಅನುಭವವನ್ನು ನೀಡಿತ್ತು. ಆದರೆ ತದನಂತರ ಅದು ಕಹಿ ಮಾತ್ರೆಯಂತೆ ಆಯಿತು ಎಂದು ವ್ಯಂಗ್ಯವಾಡಿದರು.