ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಆಗಮಿಸಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಮಹತ್ವದ ಬೆಳವಣಿಗೆ ಎಂಬಂತೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಯಾದ ಲಷ್ಕರ್ ಎ ತೊಯ್ಬಾ ಮತ್ತು ಜೈಷ್ ಎ ಮೊಹಮ್ಮದ್ ಮೇಲೆ ಅಮೆರಿಕ ಶುಕ್ರವಾರ ನಿಷೇಧ ಹೇರಿದೆ.
2006ರಲ್ಲಿ ಸಂಭವಿಸಿದ ಮುಂಬೈ ಟ್ರೈನ್ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ 26/11 ಮುಂಬೈ ದಾಳಿ ಉಗ್ರರಿಗೆ ತರಬೇತಿ ನೀಡಿದ ಲಷ್ಕರ್ ಕಮಾಂಡ್ ಅಜಾಮ್ ಚೀಮಾನನ್ನು ಗುರಿಯಾಗಿರಿಸಿ ಈ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲ ಲಷ್ಕರ್ ಇ ತೊಯ್ಬಾದ ರಾಜಕೀಯ ವ್ಯವಹಾರ ಇಲಾಖೆಯ ಮುಖ್ಯಸ್ಥ ಹಫೀಜ್ ಅಬ್ದುಲ್ ರಹಮಾನ್ ಮಾಕ್ಕಿ, ಜೈಷ್‌ನ ಅಲ್ ರೆಹಮಾನ್ ಹಾಗೂ ಜೆಇಎಂನ ಸ್ಫಾಪಕ ಮೌಲಾನಾ ಅಜಾರ್ ಅಲ್ವಿ ವಿರುದ್ಧವೂ ನಿರ್ಬಂಧ ಹೇರಿರುವುದಾಗಿ ಅಮೆರಿಕದ ಹಣಕಾಸು ಇಲಾಖೆ ತಿಳಿಸಿದೆ.
ಬರಾಕ್ ಒಬಾಮ ಅವರು ಭಾರತಕ್ಕೆ ನಾಲ್ಕು ದಿನಗಳ ಕಾಲ ಪ್ರವಾಸಕ್ಕೆ ಆಗಮಿಸುವ ಮುನ್ನವೇ ಅಮೆರಿಕ ಈ ನಿರ್ಧಾರವನ್ನು ಕೈಗೊಂಡಿದೆ. ಆ ನಿಟ್ಟಿನಲ್ಲಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾರದರ್ಶಕವಾಗಿ, ಕಠಿಣ ಕ್ರಮಕ್ಕೆ ಮುಂದಾಗುವಂತೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಲಷ್ಕರ್ ಇ ತೊಯ್ಬಾದ ಪ್ರಮುಖ ಕಮಾಂಡರ್ ಆಗಿರುವ ಚೀಮಾ 2008 ಮತ್ತು 2006ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿರುವ ಅಮೆರಿಕ, ಈ ಭೀಕರ ದಾಳಿಗಾಗಿ ಚೀಮಾ ಪ್ರಮುಖವಾಗಿ ಹಣಕಾಸಿನ ನೆರವು ನೀಡಿರುವುದಾಗಿ ತಿಳಿಸಿದೆ.
ಚೀಮಾ ಲಷ್ಕರ್ ಇ ತೊಯ್ಬಾದ ಪ್ರಮುಖ ರೂವಾರಿಯಾಗಿದ್ದು, ನವೆಂಬರ್ 26 ಮತ್ತು 2008ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀಮಾನನ್ನು ಬಂಧಿಸಲಾಗಿತ್ತು.
2008ರಲ್ಲಿ ಲಷ್ಕರ್ ಇ ತೊಯ್ಬಾದ ಉಗ್ರರು ವಾಣಿಜ್ಯ ನಗರಿ ಮುಂಬೈ ಮೇಲೆ ನಡೆಸಿದ ಭಯೋತ್ಪಾದನಾ ದಾಳಿಯಲ್ಲಿ ಸುಮಾರು 166 ಮಂದಿ ಬಲಿಯಾಗಿದ್ದರು. 300ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಪ್ರತಿಷ್ಠಿತ ತಾಜ್ ಹೋಟೆಲ್ ಕೂಡ ಉಗ್ರರ ಅಟ್ಟಹಾಸಕ್ಕೆ ನಲುಗಿ ಹೋಗಿತ್ತು. ಇದೀಗ ಒಬಾಮ ಭಾರತಕ್ಕೆ ಆಗಮಿಸಿದಾಗ ತಾಜ್ ಹೋಟೆಲ್‌ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.