ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ ಸ್ವಾಗತಕ್ಕೆ ಭಾರತ ಸಕಲ ಸಿದ್ದತೆ ಮಾಡಿಕೊಂಡಿರುವ ಬೆನ್ನಲ್ಲೇ, ಒಬಾಮ ಭದ್ರತಾ ಅಧಿಕಾರಿಗಳು ಸ್ವತಃ ಮಹಾರಾಷ್ಟ್ರ ಸರಕಾರ ಜನಪ್ರತಿನಿಧಿಗಳಿಗೆ ವೈಯಕ್ತಿಕ ವಿವರ ನೀಡುವಂತೆ ಕಿರುಕುಳ ನೀಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಮಾಹಾರಾಷ್ಟ್ರ ಸಿಎಂ ಸೇರಿದಂತೆ ಹಲವು ಪ್ರಮುಖರು ಒಬಾಮ ಅವರ ಕಾರ್ಯಕ್ರಮಕ್ಕೆ ತೆರಳದಿರಲು ನಿರ್ಧರಿಸಿದ್ದಾರೆಂದು ವರದಿಯೊಂದು ತಿಳಿಸಿದೆ.
ವರದಿಯ ಪ್ರಕಾರ, ಒಬಾಮ ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಹಾಜರಾಗಲು ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾಣ್ ಹಾಗೂ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಸೇರಿದಂತೆ ಹಿರಿಯ ಸಚಿವರಿಗೆ ಪಾಸ್‌ಪೋರ್ಟ್, ಆಹ್ವಾನ ಪತ್ರಿಕೆ, ಪ್ಯಾನ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಜನ್ಮ ದಿನಾಂಕ, ರಕ್ತದ ಗುಂಪು ಮುಂತಾದ ದಾಖಲೆಗಳನ್ನು ನೀಡುವಂತೆ ಒಬಾಮ ಭದ್ರತಾ ಸಿಬ್ಬಂದಿಗಳು ಕೇಳುತ್ತಿದ್ದಾರಂತೆ!
ನಾವು ನಮ್ಮದೇ ರಾಜ್ಯದಲ್ಲಿ ಇಷ್ಟೆಲ್ಲಾ ದಾಖಲೆ ಒದಗಿಸಿ ಒಬಾಮ ಕಾರ್ಯಕ್ರಮಕ್ಕೆ ತೆರಳಬೇಕೆ ಎಂದು ಉಪ ಮುಖ್ಯಮಂತ್ರಿ ಛಗನ್ ಎನ್‌ಡಿ ಟಿವಿ ಜತೆ ಮಾತನಾಡುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಆಹ್ವಾನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ ಸರಕಾರದ ಸಚಿವರುಗಳನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯೇ? ಅವರನ್ನು ಆಹ್ವಾನಿಸಿದ್ದೇ ನಾವು, ಹಾಗಿದ್ದ ಮೇಲೆ ನಾವು ಯಾರೆಂದು ಅವರಿಗೆ ಗೊತ್ತಿಲ್ಲವೇ? ಎಂದು ಛಗನ್ ಒಬಾಮ ಭದ್ರತಾ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಗಾಗಿ ಗುರುವಾರ ತಾನು ಅಮೆರಿಕ ಕಾನ್ಸುಲೇಟ್ ಅಧಿಕಾರಿಗಳನ್ನು ಭೇಟಿಯಾಗಿ ಈ ಬೆಳವಣಿಗೆ ಕುರಿತು ಚರ್ಚಿಸಿ, ಮಾಹಿತಿ ನೀಡಿದ್ದೇನೆ. ಆದರೂ ತಾನು ಈ ಕಾರ್ಯಕ್ರಮಕ್ಕೆ ತೆರಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರಿಗೆ ಈವರೆಗೂ ಒಬಾಮ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿಲ್ಲವಂತೆ! ಏನೇ ಇರಲಿ ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ಸಂಪ್ರದಾಯ ಪ್ರಕಾರ ಆಹ್ವಾನ ಪತ್ರಿಕೆ ಮೊದಲು ನೀಡಬೇಕು. ಇಲ್ಲಿ ಆ ಶಿಷ್ಟಾಚಾರವೇ ಪಾಲನೆ ಆಗಿಲ್ಲ ಎಂದು ಚವಾಣ್ ಹೇಳಿದ್ದಾರೆ.