ಮುಂಬೈನಿಂದ ಬಂದಿಳಿದ ಒಬಾಮಾ ದಂಪತಿಗಳನ್ನು, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವರ ಧರ್ಮಪತ್ನಿ ಗುರುಶರನ್ ಕೌರ್ ವೈಯಕ್ತಿಕವಾಗಿ ಸ್ವಾಗತಿಸಿದರು ಎಂದು ಮೂಲಗಳು ತಿಳಿಸಿವೆ.
ಮೂರು ದಿನಗಳ ಪ್ರವಾಸದ ಎರಡನೇ ಹಂತವಾಗಿ ಒಬಾಮಾ ನವದೆಹಲಿಗೆ ಭೇಟಿ ನೀಡಿದ್ದಾರೆ. ನಿನ್ನೆ ಮಧ್ಯಾಹ್ನ ಮುಂಬೈಗೆ ಆಗಮಿಸಿ, ಮುಂಬೈ ಉಗ್ರರ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದರು. ನಂತರ ವಹಿವಾಟು ಹಾಗೂ ಶಾಲಾ ಕಾಲೇಜ್‌ಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಮೆರಿಕದ ಅದ್ಯಕ್ಷ ಬರಾಕ್ ಒಬಾಮಾ ಅವರ ಏರ್‌ಫೋರ್ಸ್ ಒನ್ ವಿಮಾನ ಮಧ್ಯಾಹ್ನ 3.25 ನಿಮಿಷಕ್ಕೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.
PTI
ಕೆಲ ನಿಯಮಗಳನ್ನು ಬದಿಗೊತ್ತಿದ ಪ್ರದಾನಿ ಡಾ.ಸಿಂಗ್, ತಮ್ಮ ಪತ್ನಿ ಸೇರಿದಂತೆ ಸೇನಾ ಮುಖ್ಯಸ್ಥರು ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರೊಂದಿಗೆ,ಒಬಾಮಾ ದಂಪತಿಗಳನ್ನು ಆತ್ಮಿಯವಾಗಿ ಸ್ವಾಗತಿಸಿದರು.
ಒಬಾಮಾ, ವಿಮಾನನಿಲ್ದಾಣದಿಂದ ಅಮೆರಿಕ ರಾಯಭಾರಿ ಕಚೇರಿಗೆ ತೆರಳಿದ್ದು, ಸಿಬ್ಬಂದಿಗಳ ಕುಶಲೋಪರಿಗಳನ್ನು ವಿಚಾರಿಸಿದ ನಂತರ ಹುಮಾಯೂನ್ ಗೋರಿಗೆ ಭೇಟಿ ನೀಡಲಿದ್ದಾರೆ.
ಇಂದು ರಾತ್ರಿ,ಒಬಾಮಾ ದಂಪತಿಗಳು, ಪ್ರಧಾನಿ ಡಾ.ಸಿಂಗ್ ತಮ್ಮ ಅಧಿಕೃತ ನಿವಾಸದಲ್ಲಿ ಏರ್ಪಡಿಸಿದ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.