ಆರೋಗ್ಯವಂತ ಮಕ್ಕಳ ಜನನದ ಉದ್ದೇಶದಿಂದ ಜಾರ್ಖಂಡ್‌ನಲ್ಲಿ ವಿವಾಹಪೂರ್ವ ರಕ್ತ ತಪಾಸಣೆಗೆ ಸರಕಾರವು ಕ್ರಮ ಕೈಗೊಗುತ್ತದೆ ಎಂದು ಅಲ್ಲಿನ ಮುಖ್ಯಮಂತ್ರಿ ಅರ್ಜುನ್ ಮುಂಡಾ ತಿಳಿಸಿದ್ದಾರೆ.
ಈ ರೀತಿಯಾಗಿ ವಿವಾಹಪೂರ್ವ ರಕ್ತ ಪರೀಕ್ಷೆ ಮಾಡಿಸುವುದರಿಂದ ಮಾರಣಾಂತಿಕ ಏಡ್ಸ್ ಅಥವಾ ಎಚ್ಐವಿ ಹರಡುವುದನ್ನೂ ನಿಯಂತ್ರಿಸಬಹುದು ಎಂಬುದು ಅಲ್ಲಿನ ಬಿಜೆಪಿ ಸರಕಾರದ ಉದ್ದೇಶ.
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಈ ಕ್ರಮ ಅನಿವಾರ್ಯ ಎಂದು ಮುಂಡಾ ಅವರು ಸುದ್ದಿಗಾರರಿಗೆ ತಿಳಿಸಿದ್ದು, ಎಲ್ಲ ಜಿಲ್ಲೆಗಳಲ್ಲಿ ಆಧುನಿಕ ಪ್ರಯೋಗಾಲಯಗಳನ್ನು ಇದಕ್ಕಾಗಿ ತೆರೆಯಲಾಗುತ್ತದೆ ಎಂದಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಜಾರ್ಖಂಡ್‌ನಲ್ಲಿ ಶೇ.70ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆರೋಗ್ಯಪೂರ್ಣ ವೈವಾಹಿಕ ಜೀವನ ಮತ್ತು ಆರೋಗ್ಯವಂತ ಶಿಶುಗಳಿಗೆ ಜನನ ನೀಡುವುದು ಇದರಿಂದ ಸಾಧ್ಯವಾಗುತ್ತದೆ.
ಆದರೆ, ರಕ್ತ ತಪಾಸಣೆಯನ್ನು ಕಡ್ಡಾಯ ಮಾಡುವುದಿಲ್ಲ. ಇದು ಆರೋಗ್ಯವಂತರಾಗಿರಲು ಬಯಸುವ ಯುವ ಜನಾಂಗದ ವಿವೇಚನೆಗೆ ಬಿಟ್ಟ ವಿಷಯ ಎಂದೂ ಅವರು ಹೇಳಿದ್ದಾರೆ.