ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ಶಕ್ತಿ ಕುಂದಿದೆ, ಭಾರತವೀಗ ವಿಶ್ವ ಶಕ್ತಿ: ಒಬಾಮ
(Barak Obama | India Visit | America President | US President | India Visit 2010)
ಜಾಗತಿಕವಾಗಿ ಅಮೆರಿಕದ ಪಾರಮ್ಯ ಕುಸಿತವಾಗಿದೆ ಎಂಬುದನ್ನು ಒಪ್ಪಿಕೊಂಡಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ನಮ್ಮ ಮಟ್ಟಿಗೆ ಹೇಳುವುದಾದರೆ, ಆರ್ಥಿಕವಾಗಿ ಜಗತ್ತಿನ ಅನ್ಯ ರಾಷ್ಟ್ರಗಳಿಗೆ ಸರಿ ಸಮಾನವಾಗಿ ನಿಲ್ಲುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದರಲ್ಲದೆ, ಭಾರತವೀಗ ವಿಶ್ವ ಶಕ್ತಿಯಾಗಿ ಬೆಳೆದಿದೆ ಎಂದು ಹೇಳಿದ್ದಾರೆ.
ಸೋಮವಾರ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಒಬಾಮ ದಂಪತಿಗಳಿಗೆ ಅದ್ಧೂರಿಯ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಒಬಾಮ ಅವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ರಾಷ್ಟ್ರಪತಿ ಜೊತೆಗೆ ಅವರ ಪತಿ ದೇವಿಸಿಂಗ್ ಶೇಖಾವತ್ ಕೂಡ ಇದ್ದರು. ಸ್ಥಳದಲ್ಲಿಯೇ ಪ್ರಧಾನಿ ಮನಮೋಹನ್ ಸಿಂಗ್ ದಂಪತಿ ಹಾಗೂ ಕೇಂದ್ರ ಸಂಪುಟದ ಹಲವು ಸಚಿವರು ಇದ್ದರು.
ಜಗತ್ತಿನ ಶಾಂತಿ, ಸ್ಥಿರತೆ ಮತ್ತು ಏಳಿಗೆಗಾಗಿ ಭಾರತ ಮತ್ತು ಅಮೆರಿಕಗಳು ಭಯೋತ್ಪಾದನೆ ವಿರುದ್ಧದ ಹೋರಾಟದಂತಹಾ ಹಲವಾರು ವಿಷಯಗಳಲ್ಲಿ ಕೈಜೋಡಿಸುತ್ತವೆ ಎಂದು ಹೇಳಿದ ಒಬಾಮ, ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವಾಗಲೇ, ಜಾಗತೀಕರಣದ ಕೆಲವೊಂದು ಸವಾಲುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದೇ ನಮಗಿರುವ ದೊಡ್ಡ ಸವಾಲು. ನಾವು ಈ ಹಿಂದೆ ಎಲ್ಲ ಕ್ಷೇತ್ರಗಳಲ್ಲಿಯೂ ಪಾರಮ್ಯ ಸಾಧಿಸಿದ್ದೆವು. ಆದರೆ ಈಗ ಭಾರತ, ಚೀನಾ ಮತ್ತು ಬ್ರೆಜಿಲ್ ಹಾಗೂ ಇತರ ರಾಷ್ಟ್ರಗಳು ಪ್ರವರ್ಧಮಾನಕ್ಕೆ ಬಂದಿರುವುದರಿಂದ, ಅಮೆರಿಕವು ಅತಿ ದೊಡ್ಡ ಆರ್ಥಿಕತೆ ಮತ್ತು ಅತಿ ದೊಡ್ಡ ಮಾರುಕಟ್ಟೆಯಾಗಿದ್ದರೂ ಸಹಾ, ತೀವ್ರ ಪೈಪೋಟಿ ಎದುರಾಗಿದೆ ಎಂದವರು ನುಡಿದರು.
ಉಭಯ ರಾಷ್ಟ್ರಗಳ ನಡುವೆ ಈಗಾಗಲೇ ಇರುವ ಅಸಾಮಾನ್ಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಬಂದಿರುವುದಾಗಿ ಹೇಳಿದರಲ್ಲದೆ, ಭಾರತ-ಅಮೆರಿಕ ಮೈತ್ರಿಯು 21ನೇ ಶತಮಾನವನ್ನು ರೂಪಿಸಬಲ್ಲ ಮಿತ್ರತ್ವವಾಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ಭಾರತವು ಪ್ರವರ್ಧಮಾನಕ್ಕೆ ಬರುತ್ತಿರುವ ಶಕ್ತಿಯಾಗಿ ಉಳಿದಿಲ್ಲ, ಅದು ವಿಶ್ವ ಶಕ್ತಿಯೇ ಆಗಿದ್ದು, ಅದರೊಂದಿಗೆ ವಾಣಿಜ್ಯಾತ್ಮಕ ಸಂಬಂಧ ಬಲಯುತಗೊಳಿಸಲು ಶ್ರಮಿಸುವುದಾಗಿಯೂ ಒಬಾಮ ಹೇಳಿದರು. ಭಾರತದಲ್ಲಿ ದೊರೆತ ಅದ್ಭುತ ಉಪಚಾರಗಳಿಗೆ ಮನಸೋತ ಅವರು, ತಾನು ಮತ್ತು ಪತ್ನಿ ಮಿಶೆಲ್ ಇಬ್ಬರೂ ಭಾರತದ ಜನತೆಗೆ ಧನ್ಯವಾದಗಳನ್ನು ಸಲ್ಲಿಸುತ್ತಿರುವುದಾಗಿ ಹೇಳಿದರು.