ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಜಿಹಾದ್' ಹೆಸರಿನಲ್ಲಿ ಇಸ್ಲಾಂ ಧರ್ಮಕ್ಕೆ ಕಳಂಕ: ಒಬಾಮ (Barack Obama | Islam | great religion | jihad | US president)
ಇಸ್ಲಾಮ್ ಶಾಂತಿಯುತ ಮಹಾನ್ ಧರ್ಮವಾಗಿದೆ ಎಂದು ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಕೆಲವು ಉಗ್ರಗಾಮಿಗಳು 'ಜಿಹಾದ್' ಪದ ಬಳಸಿಕೊಂಡು ಮುಗ್ದರ ಮೇಲೆ ಹಿಂಸಾಚಾರ ನಡೆಸಿ ಇಸ್ಲಾಂ ಅನ್ನು ವಿಕೃತಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಮುಂಬೈನ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಮುಸ್ಲಿಮ್ ವಿದ್ಯಾರ್ಥಿ ಎ.ಅನ್ಸಾರಿ 'ಜಿಹಾದ್' ಕುರಿತು ನಿಮ್ಮ ಅಭಿಪ್ರಾಯ ಏನು ಕೇಳಿದ್ದಕ್ಕೆ ಅವರು ಈ ರೀತಿ ಉತ್ತರಿಸಿದರು.
ನಿಜಕ್ಕೂ ಇಸ್ಲಾಮ್ ಮಹಾನ್ ಧರ್ಮವಾಗಿದೆ. ಆದರೆ ಜಿಹಾದ್ ಹೆಸರಿನಲ್ಲಿ ಹಿಂಸಾಕೃತ್ಯ ನಡೆಸುವ ಭಯೋತ್ಪಾದಕರನ್ನು ನಾವು ನಿರ್ಲಕ್ಷ್ಯ ಮಾಡಬೇಕು ಎಂದರು. ಕೆಲವೇ ಕೆಲವು ಭಯೋತ್ಪಾದಕರಿಂದಾಗಿ ಮಹಾನ್ ಧರ್ಮವಾದ ಇಸ್ಲಾಂ ವಿರೂಪಗೊಳ್ಳುತ್ತಿದೆ. ಆದ್ದರಿಂದ ಇಡೀ ವಿಶ್ವ ಇಂದು ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ, ಅವರನ್ನು ನಾವೆಲ್ಲರೂ ಸೇರಿ ನಿರ್ಲಕ್ಷ ಮಾಡಬೇಕು ಎಂದರು.
ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಅಥವಾ ಜ್ಯೂವಿಶ್ ಯಾವುದೇ ಧರ್ಮದವರಾಗಿರಲಿ ನಾವು ಪ್ರತಿಯೊಂದು ಧರ್ಮವನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು. ವಿಭಿನ್ನ ಧರ್ಮದವರು ಒಟ್ಟಾಗಿ ಬಾಳುವುದು ಭಾರತದ ಸವಾಲೊಂದೇ ಅಲ್ಲ ಇಡೀ ವಿಶ್ವದ ಸವಾಲಾಗಿದೆ. ಆ ನಿಟ್ಟಿನಲ್ಲಿ ಯುವಕರು ಹಿಂಸಾಕೃತ್ಯವನ್ನು ವಿರೋಧಿಸಿ ಸಹಬಾಳ್ವೆ ನಡೆಸಲು ಜನರನ್ನು ಪ್ರೇರೇಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.
ಜಾಗತಿಕವಾಗಿ ಇಂದು ಧಾರ್ಮಿಕ ಸಹಿಷ್ಣುತೆ ಇಂದಿನ ಅಗತ್ಯವಾಗಿದೆ. ವಿಭಿನ್ನ ಜನಾಂಗದ ಬೇರೆ, ಬೇರೆ ಜಾತಿಯ ಮತ್ತು ಸಂಸ್ಕೃತಿಯ ಜನರು ಒಂದೆಡೆ ಸೇರಿ ಪರಸ್ಪರ ವಿನಿಮಯ ಮಾಡಿಕೊಳ್ಳಬೇಕಾಗಿರುವುದರಿಂದ ಪರಧರ್ಮ ಸಹಿಷ್ಣುತೆಯನ್ನು ನಾವೆಲ್ಲರೂ ಪಾಲಿಸಬೇಕು ಎಂದು ಸಲಹೆ ನೀಡಿದರು.