ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ನಿವಾಸ ಕರೆಂಟ್ ಬಿಲ್ 3 ವರ್ಷಕ್ಕೆ 7 ಲಕ್ಷ ರೂ.! (Sonia Gandhi | power bill | 10 Janpath | Lok Sabha Secretariat,)
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ 10 ಜನಪಥ್‌ನಲ್ಲಿನ ಅಧಿಕೃತ ನಿವಾಸದಲ್ಲಿ ಕಳೆದ ಮೂರು ವರ್ಷಗಳಲ್ಲಿ ಬಳಸಿದ ವಿದ್ಯುತ್ ಬಿಲ್ ಸುಮಾರು ಏಳು ಲಕ್ಷ ರೂಪಾಯಿಗೂ ಅಧಿಕವಾಗಿದೆಯಂತೆ!
ಸೋನಿಯಾ ನಿವಾಸದ ವಿದ್ಯುತ್ ಬಿಲ್ ಒಟ್ಟು 7.47 ಲಕ್ಷ ರೂಪಾಯಿ ಆಗಿದ್ದು,ಇದರಲ್ಲಿ 7.38 ಲಕ್ಷ ರೂಪಾಯಿಯನ್ನು ಲೋಕಸಭಾ ಕಾರ್ಯಾಲಯ ಭರಿಸಿದ್ದು, ಉಳಿದ 9 ಸಾವಿರ ರೂಪಾಯಿಯನ್ನು ಸೋನಿಯಾಗಾಂಧಿಯವರೇ ಕಟ್ಟಿರುವುದಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ವಿವರದಲ್ಲಿ ತಿಳಿಸಲಾಗಿದೆ.
2007-2009ರವರೆಗೆ ಸೋನಿಯಾ ನಿವಾಸದಲ್ಲಿ ಎರಡು ಲಕ್ಷಕ್ಕೂ ಅಧಿಕ ಯೂನಿಟ್ಸ್ ಬಳಸಲಾಗಿದ್ದು, ಇದರ ವೆಚ್ಚ 7.47 ಲಕ್ಷ ರೂಪಾಯಿ ಆಗಿರುವುದಾಗಿ ಹಿಸ್ಸಾರ್ ನಿವಾಸಿ ನರೇಶ್ ಸೈನಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದುಕೊಂಡ ವಿವರದಲ್ಲಿ ಉಲ್ಲೇಖಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾರಿಂದ ಯಾವುದೇ ವಿದ್ಯುತ್ ಬಿಲ್ ಪಾವತಿ ಬಾಕಿ ಇರುವುದಿಲ್ಲ ಎಂಬುದಾಗಿಯೂ ಆರ್‌ಟಿಐಯಲ್ಲಿ ಉತ್ತರ ನೀಡಲಾಗಿದೆ.
ಅಷ್ಟೇ ಅಲ್ಲ, ಸೋನಿಯಾ ಗಾಂಧಿ ಅಧಿಕೃತ ನಿವಾಸಕ್ಕೆ ಯಾವುದೇ ದೂರವಾಣಿ ಅಥವಾ ಮೊಬೈಲ್ ಹಾಗೂ ನೀರು ಸರಬರಾಜು ಸಂಪರ್ಕ ಇಲ್ಲ ಎಂದು ತಿಳಿಸಲಾಗಿದೆ. ಸೋನಿಯಾಗಾಂಧಿ ಹೆಸರಿನಲ್ಲಿ ಯಾವುದೇ ದೂರವಾಣಿ ಸಂಪರ್ಕ ಹೊಂದಿಲ್ಲ ಎಂದು ಆರ್‌ಟಿಐ ಸ್ಪಷ್ಟಪಡಿಸಿದೆ. ಆದರೆ ಸೋನಿಯಾ ಗಾಂಧಿ ಅವರ ಭದ್ರತೆ, ಪ್ರವಾಸ ಹಾಗೂ ಊಟೋಪಚಾರದ ಖರ್ಚು-ವೆಚ್ಚದ ಬಗ್ಗೆ ಲೋಕಸಭಾ ಕಾರ್ಯಾಲಯ ಯಾವುದೇ ವಿವರಣೆ ನೀಡಿಲ್ಲ ಎಂದು ಸೈನಿ ತಿಳಿಸಿದ್ದಾರೆ.