ಕಳೆದ ನಾಲ್ಕು ದಿನಗಳಿಂದ 24x7 ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತ ಭೇಟಿಯ ಸುದ್ದಿಯೇ ಟೀವಿ ವೀಕ್ಷಕರಿಗೆ ಕಿರಿಕಿರಿ ತಂದೊಡ್ಡಿದ್ದರೆ, ಭಾನುವಾರ ಮಧ್ಯಾಹ್ನ ಅವರು ಮುಂಬೈ ಬಿಟ್ಟು ದೆಹಲಿಗೆ ಹೊರಟಾಗ ಎಲ್ಲಕ್ಕಿಂತ ಹೆಚ್ಚು ಖುಷಿ ಪಟ್ಟವರು ಮುಂಬೈ ಪೊಲೀಸರು. ಎಲ್ಲರ ಮುಖದಲ್ಲಿ ನಿಟ್ಟುಸಿರು ಬಿಟ್ಟ ಭಾವನೆಯಿತ್ತು.
ಒಬಾಮ ಮುಂಬೈ ಭೇಟಿಯು ಹಲವು ವಿವಾದಗಳಿಗೆ, ಅಸಮಾಧಾನಗಳಿಗೆ ಮತ್ತು ಸಂತೋಷಕ್ಕೂ ಕಾರಣವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಒಬಾಮ ಭದ್ರತೆಯ ಹೊಣೆ ಹೊತ್ತ ಮುಂಬೈ ಪೊಲೀಸರು ಎಲ್ಲವೂ ಸುಲಲಿತವಾಗಿ ಮುಗಿದಿರುವುದರಿಂದಾಗಿಯೇ ಈಗ ನಿಟ್ಟುಸಿರುಬಿಟ್ಟಿದ್ದಾರೆ.
26/11 ಮುಂಬೈ ಭಯೋತ್ಪಾದನಾ ದಾಳಿಯ ಗುರಿಗಳಲ್ಲಿ ಒಂದಾಗಿದ್ದ ತಾಜ್ ಹೋಟೆಲ್‌ನಲ್ಲಿ ಒಬಾಮ ತಂಗಿರುವುದು 'ಉಗ್ರರಿಗೆ ಪ್ರಬಲ ಸಂದೇಶ' ನೀಡಿದಂತಾಗಿದೆ ಎಂದು ಹೇಳಿಕೊಂಡಿದ್ದಾರೆ ಒಬಾಮ. ಆದರೆ ತಾಜ್ ಹೋಟೆಲ್‌ನಲ್ಲಿ ಅವರು ಮಾಡಿದ ಭಾಷಣಕ್ಕೆ ಬಿಜೆಪಿ ಅಪಸ್ವರ ಎತ್ತಿತು. ಆದರೆ ಮಣಿಭವನ ಮತ್ತು ಸೈಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಹುಡುಗರು ಹಿರಿಯರು ಎಲ್ಲರೂ ಒಬಾಮ ಜೊತೆ ಸಂತೋಷೋಲ್ಲಾಸದಿಂದ ಕಳೆದರು.
ಕರ್ತವ್ಯದಲ್ಲಿ 43 ಸಾವಿರ ಸಿಬ್ಬಂದಿ ಒಬಾಮ ಬಂದು ಹೋದಾಗ ನಿಟ್ಟುಸಿರು ಬಿಟ್ಟವರು ಸುಮಾರು 43 ಸಾವಿರ ಮಂದಿ ಭದ್ರತಾ ಸಿಬ್ಬಂದಿ.
ಕ್ಷಿಪ್ರ ಪ್ರತಿಕ್ರಿಯೆ ದಳಗಳು, ಮುಂಬೈ ಕಮಾಂಡೋಗಳು ಮುಂತಾದ ವಿಶೇಷ ಪಡೆಗಳೆಲ್ಲ ಕಟ್ಟೆಚ್ಚರದಲ್ಲಿದ್ದರೆ, ನಗರದ ಅಗ್ನಿಶಾಮಕ ದಳ ಮುಂತಾದ ಸ್ಥಳೀಯ ಪಡೆಗಳೂ ಒಬಾಮ ಭದ್ರತೆಗಾಗಿ ತುದಿಗಾಲಲ್ಲಿದ್ದವು. ಅವರ ಭೇಟಿ ಸಂದರ್ಭ ಕೆಲವು ಕಡೆ ಟ್ರಾಫಿಕ್ ಜಾಮ್ ಕೂಡ ಆಗಿದ್ದರಿಂದ ಸಂಚಾರಿ ಪೊಲೀಸರು ಕೂಡ ಪೂರ್ಣಪ್ರಮಾಣದಲ್ಲಿ ಒಬಾಮ ನಿಮಿತ್ತ ಕರ್ತವ್ಯಕ್ಕೆ ಹಾಜರಾಗಿದ್ದರು.
ವಿಮಾನ ನಿಲ್ದಾಣ ಪ್ರದೇಶದಲ್ಲಿ ಭದ್ರತೆಯ ಹೊಣೆಗಾರಿಕೆ ಹೊತ್ತಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು ಹೆಚ್ಚುವರಿ ಪಡೆಗಳನ್ನು ನಿಯೋಜಿಸಿ, ಒಬಾಮ ಸುರಕ್ಷಿತವಾಗಿ ಬಂದು ಹೋಗಲಿ ಎಂದು ಪ್ರಾರ್ಥಿಸುತ್ತಿತ್ತು.